ಬೆಳಗಾವಿ : ನಗರದ ಪೊಲೀಸ್ ಕಮಿಷನರ್ ಕಚೇರಿ ಪಕ್ಕದಲ್ಲಿರುವ ಜಿಮಖಾನ್ ಕ್ಲಬ್‌ನಲ್ಲಿ ಮಂಗಳವಾರ ರಾತ್ರಿ ಸಿನಿಮೀಯ ರೀತಿಯ ಗುಂಡಿನ ದಾಳಿ ನಡೆದಿದ್ದು, ಸುರೇಶ್ ಜಾಲಗಾರ ಎಂಬಾತನನ್ನು ಹತ್ಯೆ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ.
ರಮ್ಮಿ ಆಡುತ್ತಿದ್ದ ವೇಳೆ ಕ್ಲಬ್‌ಗೆ ನುಗ್ಗಿದ ಐವರು ಆರೋಪಿಗಳ ಪೈಕಿ ಮೂವರು ಒಳಗೆ ಪ್ರವೇಶಿಸಿ ದಾಳಿ ನಡೆಸಿದ್ದು, ಉಳಿದ ಇಬ್ಬರು ಹೊರಗಡೆ ನಿಂತು ಕಾವಲು ಕಾಯುತ್ತಿದ್ದರು ಎಂದು ತಿಳಿದುಬಂದಿದೆ.
ದುಷ್ಕರ್ಮಿಗಳು ಮೊದಲು ಸುರೇಶ್ ಜಾಲಗಾರನ ತಲೆಗೆ ಗನ್‌ನಿಂದ ಹೊಡೆದು ಬಳಿಕ ಗುಂಡು ಹಾರಿಸಲು ಮುಂದಾಗಿದ್ದಾರೆ. ಆದರೆ ಅವರನ್ನು ತಳ್ಳಿ ತಪ್ಪಿಸಿಕೊಂಡ ಸುರೇಶ್ ಅಲ್ಲಿಂದ ಪರಾರಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಳಿಕ ಆರೋಪಿಗಳು ಅವನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದರೂ ಸುರೇಶ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಸುರೇಶ್ ಕ್ಲಬ್‌ನಿಂದ ಹೊರಗೆ ಓಡಿಹೋದ ಬಳಿಕ ಆರೋಪಿಗಳು ಹೊರಬಂದು ಮತ್ತೆರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಗರದ ಹೃದಯಭಾಗದಲ್ಲಿ, ಅದೂ ಪೊಲೀಸ್ ಕಮಿಷನರ್ ಕಚೇರಿ ಪಕ್ಕದಲ್ಲೇ ನಡೆದ ಈ ಘಟನೆ ಆತಂಕಕ್ಕೆ ಕಾರಣವಾಗಿದೆ.
ಘಟನೆಯ ಮಾಹಿತಿ ತಿಳಿದು ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ತನಿಖೆಗೆ ಸೂಚನೆ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸುರೇಶ್ ಜಾಲಗಾರ ಅವರ ಬಳಿ ಓಡಿಬಂದಿದ್ದಾನೆ. ಈ ಹಿಂದೆ ಪ್ರಫುಲ್ ಪಾಟೀಲ್ ಎಂಬಾತನ ಮೇಲೆ ತಾನೇ ಫೈರಿಂಗ್ ಮಾಡಿದ್ದೆ. ಅದರ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಇಂದು ಪ್ರಫುಲ್ ಪಾಟೀಲ್ ಕಡೆಯವರೇ ತನ್ನ ಮೇಲೆ ಹತ್ಯೆಗೆ ಯತ್ನ ನಡೆಸಿದ್ದಾರೆ ಎಂದು ಸುರೇಶ್ ಜಾಲಗಾರ ಪೊಲೀಸರಿಗೆ ಹೇಳಿರುವುದಾಗಿ ತಿಳಿದುಬಂದಿದೆ.
ಘಟನೆಯ ಬಳಿಕ ಸುರೇಶ್ ಜಾಲಗಾರನನ್ನು ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಇಬ್ಬರನ್ನು ಬಲಿಪಡೆದ 14 ವರ್ಷದ ಬಳಿಕ ಅದೇ ಕುಟುಂಬವನ್ನು ಹುಡುಕಿ ಬಂದು ಮತ್ತಿಬ್ಬರ ಕೊಂದ ಕಾಡಾನೆ!



















