ನವದೆಹಲಿ: ಭಾರತದ ಆಪರೇಷನ್ ಸಿಂದೂರದಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ. ಬಲೂಚಿಸ್ತಾನದಲ್ಲಿ ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್ಎ) ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಪಾಕಿಸ್ತಾನದ 14 ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಎರಡೇ ದಿನಗಳಲ್ಲಿ ಎರಡು ಪೆಟ್ಟು ಬಿದ್ದಂತಾಗಿದೆ.
ಬಲೂಚಿಸ್ತಾನ ಪ್ರಾಂತ್ಯದ ಬೋಲಾನ್ ಹಾಗೂ ಕೆಚ್ ಪ್ರದೇಶಗಳಲ್ಲಿ ಬಿಎಲ್ಐ ದಾಳಿ ನಡೆಸಿದ್ದು, ಒಟ್ಟು 14 ಸೈನಿಕರು ಬಲಿಯಾಗಿದ್ದಾರೆ ಎನ್ನಲಾಗಿದೆ. ಮೊದಲಿಗೆ, ಬೋಲಾನ್ ನಲ್ಲಿರುವ ಪಾಕಿಸ್ತಾನದ ಸೇನಾ ವಾಹನದ ಮೇಲೆ ಬಿಎಲ್ಎ ಸದಸ್ಯರು ಸುಧಾರಿತ ಸ್ಫೋಟಕ ಸಾಧನದ (ಐಇಡಿ) ಮೂಲಕ ದಾಳಿ ನಡೆಸಿದ್ದಾರೆ. ಇದಾದ ನಂತರ ಕೆಚ್ ನಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಬೋಲಾನ್ ನಲ್ಲಿ ನಡೆದ ದಾಳಿಯಲ್ಲಿ ಪಾಕ್ ಸೇನೆಯ ಸ್ಪೆಷಲ್ ಆಪರೇಷನ್ ಕಮಾಂಡರ್ ತಾರಿಕ್ ಇಮ್ರಾನ್, ಸುಬೇದಾರ್ ಉಮರ್ ಫಾರೂಕ್ ಸೇರಿ 12 ಸೈನಿಕರು ಹತರಾಗಿದ್ದಾರೆ. ಐಇಡಿ ಸ್ಫೋಟದ ತೀವ್ರತೆಗೆ ಸೇನಾ ವಾಹನವು ಸಂಪೂರ್ಣವಾಗಿ ಧ್ವಂಸವಾಗಿದೆ. ಕೆಚ್ ಪ್ರದೇಶದಲ್ಲಿ ಸೇನೆಯ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಎರಡೂ ದಾಳಿಗಳ ಹೊಣೆಯನ್ನು ಬಿಎಲ್ಎ ಹೊತ್ತುಕೊಂಡಿದೆ. ಗುರುವಾರ ಬೆಳಗಿನ ಜಾವ 2-2.30ರ ಸುಮಾರಿಗೆ ಬಿಎಲ್ಎ ದಾಳಿ ನಡೆಸಿದೆ ಎನ್ನಲಾಗಿದೆ. ಒಂದು ಕಡೆ, ಭಾರತದ ದಾಳಿಯಿಂದ ಪಾಕಿಸ್ತಾನ ಕಂಗೆಟ್ಟಿದೆ. ಮತ್ತೆ ಭಾರತದ ಸೇನೆ ದಾಳಿ ಮಾಡುವ ಭೀತಿಯಲ್ಲಿದೆ. ಇದರ ಮಧ್ಯೆಯೇ, ಬಿಎಲ್ಎ ಕೂಡ ಪಾಕಿಸ್ತಾನಕ್ಕೆ ಕಂಟಕವಾಗುತ್ತಿದೆ. ಹಾಗಾಗಿ, ಪಾಕಿಸ್ತಾನದ ಸೇನೆಗೆ ಏನು ಮಾಡಬೇಕೋ ತಿಳಿಯದಂತಾಗಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಕೂಡ ಪಾಕ್ ಸೇನೆಯ ಮೇಲೆ ಬಿಎಲ್ಎ ಹಲವು ದಾಳಿ ನಡೆಸಿತ್ತು.



















