ತುಮಕೂರು : ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ನಾಗೇಶ್ (28) ಎಂಬವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಶಿರಾ ನಗರದ ನಿವಾಸಿಗಳಾದ ನಾಗೇಶ್ ಮತ್ತು ಆತನ ಸಂಬಂಧಿ ಹೇಮಂತ್ ನಡುವೆ ಗಲಾಟೆ ಶುರುವಾಗಿದ್ದು, ಹೇಮಂತ್ ತನ್ನ ತೋಟಕ್ಕೆ ನಾಗೇಶ್‌ನನ್ನು ಕರೆಸಿಕೊಂಡು, ಸಹಚರರೊಂದಿಗೆ ಸೇರಿ ಮಚ್ಚು ಹಾಗೂ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಹಲ್ಲೆಯಲ್ಲಿ ನಾಗೇಶ್ ಅವರ ಎದೆಗೆ ಎರಡು ಕಡೆ, ಮುಖಕ್ಕೆ ಮೂರು ಕಡೆ, ತಲೆಗೆ ನಾಲ್ಕು ಕಡೆ, ಬೆನ್ನಿಗೆ ಒಂದು ಕಡೆ ಹಾಗೂ ಕೈಗೆ ಒಂದು ಕಡೆ ಗಾಯಗಳಾಗಿವೆ. ದೇಹದ ಹಲವು ಭಾಗಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದರಿಂದ ಅವರ ಸ್ಥಿತಿ ಗಂಭೀರವಾಗಿದ್ದು, ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕೃತ್ಯದ ಬಳಿಕ ಆರೋಪಿ ಹೇಮಂತ್ ಹಾಗೂ ಆತನ ಸಹಚರರು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನಾ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಸಾಲ ಕೊಡದಿದ್ದಕ್ಕೆ ಬೇಕರಿ ಮಾಲೀಕನ ಮೇಲೆ ಪುಡಿ ರೌಡಿಗಳ ಅಟ್ಟಹಾಸ.. ಅಂಗಡಿ ಧ್ವಂಸ!


















