ತುಮಕೂರು : ಜಿಲ್ಲೆಯಲ್ಲಿ ಸರಗಳ್ಳರ ಅಟ್ಟಹಾಸ ಮುಂದುವರಿದಿದೆ. ಭಿಕ್ಷೆ ಬೇಡುವ ನೆಪದಲ್ಲಿ ಮನೆ ಬಾಗಿಲಿಗೆ ಬಂದ ಅಪರಿಚಿತ ಮಹಿಳೆಯೊಬ್ಬಳು ಶಿಕ್ಷಕಿಯ ಕಣ್ಣಿಗೆ ಕಾರದ ಪುಡಿ ಎರಚಿ, ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರ ದೋಚಿ ಪರಾರಿಯಾಗಿರುವ ಘಟನೆ ತುಮಕೂರು ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ನಡೆದಿದೆ.
ಶಿಕ್ಷಕಿ ಚಂದ್ರಮ್ಮ ಅವರು ಮನೆಯಲ್ಲಿ ಒಬ್ಬರೇ ಇದ್ದ ವೇಳೆ, “ಅಮ್ಮಾ ಊಟ ಕೊಡಿ” ಎಂದು ಮನೆ ಬಾಗಿಲಿಗೆ ಬಂದಿದ್ದ ಮಹಿಳೆ ಮನೆಯ ಪರಿಸ್ಥಿತಿಯನ್ನು ಗಮನಿಸಿದ್ದಾಳೆ. ಬಳಿಕ ಏಕಾಏಕಿ ಚಂದ್ರಮ್ಮ ಅವರ ಕಣ್ಣಿಗೆ ಕಾರದ ಪುಡಿ ಎರಚಿ ಹಲ್ಲೆ ನಡೆಸಿ, ಅವರ ಕುತ್ತಿಗೆಯಲ್ಲಿದ್ದ 80 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದಾಳೆ.
ಕಳೆದ ಭಾನುವಾರ ನಡೆದ ಈ ಘಟನಾ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕಳೆದ 20 ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಇದೇ ರೀತಿಯ ಇದು ಮೂರನೇ ಸರ ದರೋಡೆ ಪ್ರಕರಣವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಎಚ್ಚರಿಕೆಯಿಂದ ಇರಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕೊಪ್ಪಳದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ ; ಎದ್ನೋ-ಬಿದ್ನೋ ಅಂತ ಓಡಿದ ಜೂಜುಕೋರರು!


















