ಇಸ್ಲಾಮಾಬಾದ್ : ಭಾರತ-ಪಾಕಿಸ್ತಾನದ ನಡುವಿನ ದಶಕಗಳ ಹಳೆಯ ಸಿಂಧೂ ಜಲ ಒಪ್ಪಂದದ (Indus Waters Treaty) ವಿವಾದ ಇದೀಗ ಮತ್ತೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ವರ್ಷ ನಡೆದ ಭೀಕರ ಉಗ್ರರ ದಾಳಿಯ ನಂತರ ಭಾರತವು ಈ ಒಪ್ಪಂದವನ್ನು ತಡೆಹಿಡಿದಿರುವುದಕ್ಕೆ ಇದೀಗ ಮತ್ತೊಮ್ಮೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಭಾರತಕ್ಕೆ ಪ್ರಚೋದನಕಾರಿ ಬೆದರಿಕೆ ಹಾಕುವ ಮೂಲಕ ತನ್ನ ಹತಾಶೆಯನ್ನು ಹೊರಹಾಕಿದೆ.
‘ಕೈ ಕತ್ತರಿಸುತ್ತೇವೆ’ ಎಂದ ಪಾಕ್ ಸಚಿವ
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್, ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ಸೇರಬೇಕಾದ ನೀರಿನ ಪಾಲನ್ನು ಯಾರಾದರೂ ಕಸಿದುಕೊಳ್ಳಲು ಯತ್ನಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ನ್ಯಾಯದ ಪ್ರಶ್ನೆ ಬಂದಾಗ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ. ನಮ್ಮ ನೀರಿನ ಪಾಲಿನ ಮೇಲೆ ಯಾರಾದರೂ ಕೈಯಿಟ್ಟರೆ, ಆ ಕೈಯನ್ನೇ ನಾವು ಕತ್ತರಿಸುತ್ತೇವೆ ಎಂದು ಅವರು ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಭಾರತದ ಪ್ರಧಾನಿ ನೀರಿನ ನಲ್ಲಿಯನ್ನು ನಿಯಂತ್ರಿಸುತ್ತಿದ್ದಾರೆ ಮತ್ತು ಪಾಕಿಸ್ತಾನಕ್ಕೆ ಒಂದು ಹನಿ ನೀರು ಹರಿಯದಂತೆ ಮಾಡುತ್ತಿದ್ದಾರೆ ಎಂದು ಮಲಿಕ್ ಆರೋಪಿಸಿದ್ದಾರೆ. ಪಾಕಿಸ್ತಾನದ ಶೇಕಡಾ 40ರಿಂದ 50ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿದ್ದು, ನೀರು ತಡೆಯುವುದರಿಂದ ದೇಶದ ಆಹಾರ ಭದ್ರತೆ, ಉದ್ಯೋಗ ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪೆಟ್ಟು ಬೀಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜಗತ್ತಿನ ಇತರೆಡೆ ಒಪ್ಪಂದಗಳಿಲ್ಲದಿದ್ದರೂ ನೀರು ಹರಿಯುತ್ತದೆ, ಕೆಳ ಹರಿವಿನ ದೇಶಗಳ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ವಾದಿಸಿದ್ದಾರೆ.
ಏಕಪಕ್ಷೀಯ ರದ್ದತಿ ಅಸಾಧ್ಯ ಎಂದ ತರಾರ್
ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್, 1960ರ ಸಿಂಧೂ ಜಲ ಒಪ್ಪಂದವು ಕಾನೂನುಬದ್ಧವಾಗಿದ್ದು, ಅದನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲು, ಅಮಾನತುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಭಾರತಕ್ಕೆ ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿರುವಂತೆ “ನೀರು ನಮ್ಮ ಜೀವನಾಡಿ ಹಾಗೂ ರೆಡ್ ಲೈನ್” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಭಾರತದ ದಿಟ್ಟ ನಿಲುವು
ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಗಡಿಯಾಚೆಗಿನ ಉಗ್ರರ ದಾಳಿಯಲ್ಲಿ 26 ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ಬೆನ್ನಲ್ಲೇ ಭಾರತ ಸರ್ಕಾರವು ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿದ್ದ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಟ್ಟಿತ್ತು. ಪಾಕಿಸ್ತಾನವು ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸುವವರೆಗೆ ಹಾಗೂ ಅದರ ಬಗ್ಗೆ ಸ್ಪಷ್ಟ ಪುರಾವೆ ನೀಡುವವರೆಗೆ ಈ ಒಪ್ಪಂದ ತಡೆಹಿಡಿಯಲ್ಪಡಲಿದೆ ಎಂದು ಭಾರತ ಕಟ್ಟುನಿಟ್ಟಾಗಿ ಹೇಳಿದೆ.
ಇತ್ತೀಚೆಗಷ್ಟೇ ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್. ಪಾಟೀಲ್ ಅವರು ಸಂದರ್ಶನವೊಂದರಲ್ಲಿ, ಮುಂದಿನ ಒಂದೂವರೆಯಿಂದ ಎರಡು ವರ್ಷಗಳಲ್ಲಿ ಸಿಂಧೂ ನೀರಿನಲ್ಲಿರುವ ಭಾರತದ ಸಂಪೂರ್ಣ ಪಾಲನ್ನು ಬಳಸಿಕೊಳ್ಳಲಾಗುವುದು ಮತ್ತು ಪಾಕಿಸ್ತಾನಕ್ಕೆ ಒಂದು ಹನಿ ನೀರು ಕೂಡ ಹರಿಯಲು ಬಿಡುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದರು. ಭಾರತದ ಈ ದಿಟ್ಟ ನಿಲುವಿನಿಂದ ಕಂಗಾಲಾಗಿರುವ ಪಾಕಿಸ್ತಾನ, ಇದೀಗ ಬೆದರಿಕೆಯ ತಂತ್ರದ ಮೊರೆಹೋಗಿದೆ.
ಇದನ್ನೂ ಓದಿ : ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ – ತಪ್ಪಿದ ಭಾರೀ ದುರಂತ!



















