ಬೆಂಗಳೂರು : ನಗರದ ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ಕಳೆದ ಮೂರು ವರ್ಷಗಳಲ್ಲಿ ಸರಿಸುಮಾರು ₹8,825.11 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ, ನಗರದ ರಸ್ತೆಗಳ ದುಸ್ಥಿತಿ ಮುಂದುವರಿದೆ. ಈ ಹಿನ್ನೆಲೆ ಬಿಡುಗಡೆಯಾಗಿರುವ ಅನುದಾನದ ಹಣ ಎಲ್ಲಿಗೆ ಹೋಯಿತು? ಏನಾಯ್ತು? ಯಾರ ಪಾಲಾಯ್ತು? ಎಂಬ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ, ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರಿಗೆ ದೂರು ಸಲ್ಲಿಸಿದ್ದಾರೆ.
01.04.2023ರಿಂದ 31.05.2026ರವರೆಗಿನ ಅವಧಿಯಲ್ಲಿ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 8,230.52 ಕೋಟಿ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳಿಗೆ 594.58 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇಷ್ಟೊಂದು ಹಣ ಬಿಡುಗಡೆಯಾದರೂ ಬೆಂಗಳೂರು ರಸ್ತೆಗಳಲ್ಲಿ ಇನ್ನೂ ಲಕ್ಷಾಂತರ ಗುಂಡಿಗಳು ಇರುವುದೇಕೆ ಎಂದು ಎನ್.ಆರ್. ರಮೇಶ್ ಪ್ರಶ್ನಿಸಿದ್ದಾರೆ.

ರಸ್ತೆ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಟೆಂಡರ್ ಪ್ರಕ್ರಿಯೆಯಿಂದ ಬಿಲ್ ಪಾವತಿವರೆಗೆ 12 ಹಂತಗಳಲ್ಲಿ ಶೇ.30ಕ್ಕೂ ಹೆಚ್ಚು ಲಂಚ ಪಡೆಯಲಾಗುತ್ತಿದೆ ಎಂದು ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಶೇ.35ರಿಂದ 40ರಷ್ಟು ಕಮಿಷನ್ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಪರಿಣಾಮವಾಗಿ ಕಳಪೆ ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿವೆ ಎಂದು ದೂರಿದ್ದಾರೆ.


ಹೊಸದಾಗಿ ನಿರ್ಮಿಸಲಾದ ರಸ್ತೆಗಳೂ ಕೆಲವೇ ತಿಂಗಳಲ್ಲಿ ಹಾಳಾಗುತ್ತಿದ್ದು, ವೈಜ್ಞಾನಿಕ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣವೇ ನಡೆಯುತ್ತಿಲ್ಲ ಎಂದು ಎನ್.ಆರ್ ರಮೇಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ಸಂಬಂಧಿಸಿದ 1,049 ಪುಟಗಳ ದಾಖಲೆಗಳನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಸಲ್ಲಿಸಿರುವ ಎನ್.ಆರ್ ರಮೇಶ್, ಸಂಬಂಧಪಟ್ಟ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಜಿಬಿಎ ಹಾಗೂ ಐದು ನಗರ ಪಾಲಿಕೆಗಳಲ್ಲಿ ಸಂಪೂರ್ಣ ಪಾರದರ್ಶಕ ಆಡಳಿತ ಜಾರಿಗೊಳಿಸಿ, ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಸಾರ್ವಜನಿಕರ ಮುಂದಿಡುವಂತೆ ಸಚಿವರಿಗೆ ಬಹಿರಂಗ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಹೈಟೆಕ್ ಇ-ಖಾತಾ ದಂಧೆ ಬಯಲು ; ಕೆಂಗೇರಿ ಉಪ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ N.R ರಮೇಶ್ ಆಗ್ರಹ!


















