ವಾಷಿಂಗ್ಟನ್: ಅಮೆರಿಕದ ಶ್ವೇತಭವನದ ಭದ್ರತಾ ತಪಾಸಣಾ ಕೇಂದ್ರದ (ಚೆಕ್‌ಪಾಯಿಂಟ್) ಬಳಿ ಇಂದು ಮುಂಜಾನೆ ಭೀಕರ ಗುಂಡಿನ ದಾಳಿ ನಡೆದಿದೆ. ಶ್ವೇತಭವನದ ಭದ್ರತೆಯಲ್ಲಿ ತೊಡಗಿದ್ದ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ಸುರಿಮಳೆಗರೆದಿದ್ದು, ಅಧಿಕಾರಿಗಳು ನಡೆಸಿದ ಪ್ರತಿದಾಳಿಯಲ್ಲಿ ಆತ ಸಾವನ್ನಪ್ಪಿದ್ದಾನೆ. ಮೃತನನ್ನು ಮೇರಿಲ್ಯಾಂಡ್ ಮೂಲದ 21 ವರ್ಷದ ಯುವಕ ನಾಸಿರೆ ಬೆಸ್ಟ್ ಎಂದು ಗುರುತಿಸಲಾಗಿದೆ. ಈ ಘಟನೆಯಿಂದಾಗಿ ಶ್ವೇತಭವನದ ಸುತ್ತಮುತ್ತಲ ಪ್ರದೇಶದಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮುಂಜಾನೆ ಸುಮಾರು 5 ಗಂಟೆಯ (ಭಾರತೀಯ ಕಾಲಮಾನ) ಸುಮಾರಿಗೆ ಶ್ವೇತಭವನದ ಭದ್ರತಾ ಚೆಕ್‌ಪಾಯಿಂಟ್ ಬಳಿ ಬಂದ ನಾಸಿರೆ ಬೆಸ್ಟ್, ತನ್ನ ಬ್ಯಾಗ್‌ನಿಂದ ಇದ್ದಕ್ಕಿದ್ದಂತೆ ಗನ್ ಹೊರತೆಗೆದು ಭದ್ರತಾ ಸಿಬ್ಬಂದಿಯತ್ತ ಗುಂಡು ಹಾರಿಸಲು ಆರಂಭಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಆತನ ಮೇಲೆ ಪ್ರತಿದಾಳಿ ನಡೆಸಿದ್ದು, ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಗುಂಡಿನ ಚಕಮಕಿಯ ವೇಳೆ ಅಲ್ಲೇ ಹತ್ತಿರದಲ್ಲಿದ್ದ ಸಾರ್ವಜನಿಕರೊಬ್ಬರಿಗೂ ಗುಂಡು ತಗುಲಿದ್ದು, ಅವರು ಶೂಟರ್‌ನ ಗುಂಡಿಗೆ ಬಲಿಯಾದರೇ ಅಥವಾ ಪೊಲೀಸರ ಪ್ರತಿದಾಳಿಯ ವೇಳೆ ಗಾಯಗೊಂಡರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ತಾನು ‘ಜೀಸಸ್ ಕ್ರೈಸ್ಟ್’ ಎಂದಿದ್ದ ಮಾನಸಿಕ ಅಸ್ವಸ್ಥ
ಪೊಲೀಸ್ ಮೂಲಗಳ ಪ್ರಕಾರ, ದಾಳಿಕೋರ ನಾಸಿರೆ ಬೆಸ್ಟ್ ತೀವ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಈತ ಈ ಹಿಂದೆಯೂ ಶ್ವೇತಭವನದ ವಿವಿಧ ಪ್ರವೇಶ ದ್ವಾರಗಳ ಬಳಿ ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದ ಕಾರಣ ಭದ್ರತಾ ಅಧಿಕಾರಿಗಳ ಗಮನದಲ್ಲಿದ್ದ. ಕಳೆದ ವರ್ಷದ ಜೂನ್ 26ರಂದು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆತನನ್ನು ಬಲವಂತವಾಗಿ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅದಾದ ಕೆಲವೇ ದಿನಗಳಲ್ಲಿ, ಅಂದರೆ ಜುಲೈ 10ರಂದು ಶ್ವೇತಭವನದ ನಿಷೇಧಿತ ಪ್ರದೇಶಕ್ಕೆ ಅಕ್ರಮವಾಗಿ ನುಗ್ಗಲು ಯತ್ನಿಸಿ ಬಂಧನಕ್ಕೊಳಗಾಗಿದ್ದ. ತನಿಖೆಯ ವೇಳೆ ಆತ, “ನಾನು ಆಧುನಿಕ ಯುಗದ ಜೀಸಸ್ ಕ್ರೈಸ್ಟ್‌ನ ಅವತಾರ” ಎಂದು ಹೇಳಿಕೊಂಡಿದ್ದ. ನನಗೆ ಬಂಧನಕ್ಕೊಳಗಾಗುವ ಇಚ್ಛೆಯಿತ್ತು ಎಂದು ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದ ಎನ್ನಲಾಗಿದೆ. ಶ್ವೇತಭವನದ ಆವರಣಕ್ಕೆ ಬರಬಾರದು ಎಂದು ಆತನಿಗೆ ನ್ಯಾಯಾಲಯ ಸೂಚಿಸಿತ್ತು. ಆ ಆದೇಶವನ್ನೂ ಆತ ಉಲ್ಲಂಘಿಸಿದ್ದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಅಧ್ಯಕ್ಷ ಟ್ರಂಪ್ ಸುರಕ್ಷಿತ
ಗುಂಡಿನ ದಾಳಿ ನಡೆದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದ ಒಳಗಡೆಯೇ ಇದ್ದರು. ಆದರೆ ಈ ಘಟನೆಯಿಂದ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಮತ್ತು ಅವರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆಯಷ್ಟೇ ವಾಷಿಂಗ್ಟನ್ ಹೋಟೆಲ್‌ನಲ್ಲಿ ನಡೆದಿದ್ದ ಶ್ವೇತಭವನದ ವರದಿಗಾರರ ಸಂಘದ ವಾರ್ಷಿಕ ಭೋಜನಕೂಟದ ವೇಳೆ ಅಧ್ಯಕ್ಷ ಟ್ರಂಪ್ ಅವರ ಹತ್ಯೆಗೆ ಯತ್ನ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಶ್ವೇತಭವನದ ಸನಿಹದಲ್ಲೇ ಮತ್ತೊಮ್ಮೆ ಈ ಭದ್ರತಾ ಲೋಪ ಮತ್ತು ಗುಂಡಿನ ದಾಳಿ ನಡೆದಿರುವುದು ತೀವ್ರ ಕಳಕಳಿಯನ್ನುಂಟು ಮಾಡಿದೆ.



















