ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ‘ (ಸಿಜೆಪಿ) ಡಿಜಿಟಲ್ ಚಳವಳಿಯ ಬೆಂಬಲಿಗರನ್ನು ಪಾಕಿಸ್ತಾನ ಮತ್ತು ಜಾರ್ಜ್ ಸೊರೊಸ್ ಜಾಲಕ್ಕೆ ನಂಟು ಕಲ್ಪಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಪೇಜ್‌ನ ಫಾಲೋವರ್ಸ್‌ಗಳಲ್ಲಿ ಶೇ.94ರಷ್ಟು ಮಂದಿ ಭಾರತೀಯರೇ ಆಗಿದ್ದಾರೆ ಎಂದು ಸಾಬೀತುಪಡಿಸುವ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ ಅವರು, “ಕೇಂದ್ರ ಸಚಿವರು ಭಾರತೀಯ ಯುವಕರಿಗೆ ಪಾಕಿಸ್ತಾನಿಗಳು ಎಂದು ಏಕೆ ಹಣೆಪಟ್ಟಿ ಕಟ್ಟುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಜಾಲತಾಣದಲ್ಲಿ ಸಚಿವರ ನೇರ ವಾಗ್ದಾಳಿ
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ‘X’ (ಟ್ವಿಟರ್) ಖಾತೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಹೆಸರನ್ನು ನೇರವಾಗಿ ಉಲ್ಲೇಖಿಸದೆ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದರು. “ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಮತ್ತು ಜಾರ್ಜ್ ಸೊರೊಸ್ ಗ್ಯಾಂಗ್‌ನಿಂದ ಫಾಲೋವರ್ಸ್‌ಗಳನ್ನು ಹುಡುಕುವವರನ್ನು ಕಂಡರೆ ನನಗೆ ಮರುಕವಾಗುತ್ತದೆ. ಭಾರತದಲ್ಲೇ ಸಾಕಷ್ಟು ಜನಸಂಖ್ಯೆ ಮತ್ತು ಅತ್ಯಂತ ಶಕ್ತಿಶಾಲಿ ಯುವ ಸಮೂಹವಿದೆ, ಅವರೇ ನಿಜವಾದ ಮತ್ತು ಮೌಲ್ಯಯುತ ಫಾಲೋವರ್ಸ್ ಆಗಬಲ್ಲರು. ಭಾರತ ವಿರೋಧಿ ಗ್ಯಾಂಗ್‌ನಿಂದ ನಾವು ಮಾನ್ಯತೆ ಪಡೆಯುವ ಅಗತ್ಯವಿಲ್ಲ” ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ದೀಪ್ಕೆ ಅವರು ತಮ್ಮ ಖಾತೆ ಹ್ಯಾಕ್ ಆಗುವ ಮುನ್ನ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದ ಪ್ರೇಕ್ಷಕರು ಹಾಗೂ ಫಾಲೋವರ್‌ಗಳ ಸಂಖ್ಯೆಯ ವಿವರಗಳ (Audience Demographics) ಸಾಕ್ಷ್ಯವನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ, ಭಾರತೀಯ ಯುವಜನತೆಯನ್ನು ನೀವೇಕೆ ಪಾಕಿಸ್ತಾನೀಯರೆಂದು ಕರೆಯುತ್ತೀರಿ ಎಂದು ರಿಜಿಜುಗೆ ಪ್ರಶ್ನೆ ಮಾಡಿದ್ದಾರೆ.
ಏನಿದು ಕಾಕ್ರೋಚ್ ಜನತಾ ಪಾರ್ಟಿ?
ಕಳೆದ ಒಂದು ವಾರದಿಂದ ಇಂಟರ್ನೆಟ್‌ನಲ್ಲಿ ದೊಡ್ಡ ಮಟ್ಟದ ಟ್ರೆಂಡ್ ಸೃಷ್ಟಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ಒಂದು ವ್ಯಂಗ್ಯಭರಿತ ಹಾಗೂ ವಿಡಂಬನಾತ್ಮಕ ಡಿಜಿಟಲ್ ಚಳವಳಿಯಾಗಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯೊಂದರ ವೇಳೆ ವಕೀಲರೊಬ್ಬರ ಅರ್ಹತೆಯ ಕುರಿತು ಮಾತನಾಡುತ್ತಾ, ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ಆಡಿದ್ದಾರೆನ್ನಲಾದ ‘ಕಾಕ್ರೋಚ್’ ಮತ್ತು ‘ಪರಾವಲಂಬಿ’ ಎಂಬ ಪದಗಳನ್ನೇ ಬಳಸಿಕೊಂಡು ಈ ವೇದಿಕೆಯನ್ನು ಆರಂಭಿಸಲಾಗಿದೆ. ಆದಾಗ್ಯೂ, ನಕಲಿ ಪದವಿಗಳ ಮೂಲಕ ವಕೀಲ ವೃತ್ತಿಗೆ ಬರುವವರನ್ನು ಉಲ್ಲೇಖಿಸಿ ತಾವು ಆ ಮಾತು ಹೇಳಿದ್ದಾಗಿ ಸಿಜೆಐ ನಂತರ ಸ್ಪಷ್ಟಪಡಿಸಿದ್ದರೂ, ಇದನ್ನೇ ಬಂಡವಾಳವಾಗಿಸಿಕೊಂಡ ದೀಪ್ಕೆ, ಯುವಕರ ಉದ್ಯೋಗ ಸಮಸ್ಯೆ, ಪರೀಕ್ಷೆಯ ಒತ್ತಡ ಹಾಗೂ ನೇಮಕಾತಿ ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ಯುವ ಚಳವಳಿಯಾಗಿ ಇದನ್ನು ರೂಪಿಸಿದ್ದಾರೆ. ಇದಕ್ಕೆ ದೇಶದ ಜೆನ್ ಝೀಗಳಿಂದ(ಯುವ ಜನಾಂಗ) ಭಾರೀ ಪ್ರಮಾಣದ ಬೆಂಬಲವೂ ವ್ಯಕ್ತವಾಗುತ್ತಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬೆನ್ನಲ್ಲೇ ಬೆಳವಣಿಗೆ
ಪ್ರಸ್ತುತ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ‘ನೀಟ್-ಯುಜಿ 2026’ (NEET-UG 2026) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಸಮಯದಲ್ಲೇ ಈ ವೇದಿಕೆ ಅತ್ಯಂತ ಜನಪ್ರಿಯವಾಗಿದೆ. ಪರೀಕ್ಷಾ ಪದ್ಧತಿಯಿಂದ ಬೇಸತ್ತಿದ್ದ ಲಕ್ಷಾಂತರ ವೈದ್ಯಕೀಯ ವಿದ್ಯಾರ್ಥಿಗಳ ಧ್ವನಿಯಾಗಿ ಇದು ಬಿಂಬಿತವಾಗಿದೆ. ಪರಿಣಾಮವಾಗಿ, ಲಾಂಚ್ ಆದ ಕೆಲವೇ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿ ಈ ಪೇಜ್ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಧಿಕೃತ ಪೇಜ್‌ಗಳನ್ನೇ ಹಿಂದಿಕ್ಕಿ ಮುನ್ನಡೆ ಸಾಧಿಸಿದೆ. ಈ ವೇದಿಕೆಯ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಸಿದ ಆನ್‌ಲೈನ್ ಅಭಿಯಾನಕ್ಕೆ ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಸಹಿ ಹಾಕಿದ್ದರು ಮತ್ತು 10 ಲಕ್ಷಕ್ಕೂ ಹೆಚ್ಚು ಬಳಕೆದಾರರು ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದರು ಎಂದು ದೀಪ್ಕೆ ಹೇಳಿದ್ದಾರೆ.
ಹ್ಯಾಕಿಂಗ್, ನಿಷೇಧದ ಆರೋಪ
ತಮ್ಮ ಚಳವಳಿ ತೀವ್ರಗೊಳ್ಳುತ್ತಿದ್ದಂತೆ ಸರ್ಕಾರದ ವ್ಯವಸ್ಥಿತ ಹತ್ತಿಕ್ಕುವಿಕೆ ಆರಂಭವಾಗಿದೆ ಎಂದು ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ. ಸಂಸ್ಥೆಯ ಇನ್‌ಸ್ಟಾಗ್ರಾಮ್ ಪೇಜ್, ತಮ್ಮ ವೈಯಕ್ತಿಕ ಖಾತೆ ಹಾಗೂ ಅಧಿಕೃತ ‘X’ ಹ್ಯಾಂಡಲ್‌ಗಳನ್ನು ಹ್ಯಾಕ್ ಮಾಡಲಾಗಿದೆ ಅಥವಾ ತಡೆಹಿಡಿಯಲಾಗಿದೆ ಎಂದು ಅವರು ದೂರಿದ್ದಾರೆ. ಅಲ್ಲದೆ ವೆಬ್‌ಸೈಟ್ ಅನ್ನು ಸಹ ಸ್ಥಗಿತಗೊಳಿಸಲಾಗಿದ್ದು, ತಮಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ದೀಪ್ಕೆ ತಿಳಿಸಿದ್ದಾರೆ. “ಪೇಪರ್ ಲೀಕ್ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಶಿಕ್ಷಣ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಹೊಸ ಭಾರತದಲ್ಲಿ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. ಈ ವೇದಿಕೆಯನ್ನು ಸ್ಥಾಪಿಸಿರುವ ಅಭಿಜೀತ್ ದೀಪ್ಕೆ ಅವರು ಪುಣೆ ಮೂಲದವರಾಗಿದ್ದು, ಸದ್ಯ ಬೋಸ್ಟನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಹಿಂದೆ 2020ರ ದೆಹಲಿ ವಿಧಾನಸಭಾ ಚುನಾವಣೆಯ ವೇಳೆ ಆಮ್ ಆದ್ಮಿ ಪಾರ್ಟಿ (AAP) ಪರ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ.



















