ಅಮೆರಿಕದ ಹಲವು ರಾಜ್ಯಗಳಲ್ಲಿ ಪ್ರಬಲ ಚಂಡಮಾರುತ ಮತ್ತು ಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಭಾರೀ ಮಳೆ, ಬಲವಾದ ಗಾಳಿ ಹಾಗೂ ಪ್ರವಾಹದಿಂದ ಸಾವಿರಾರು ಜನರು ತೊಂದರೆ ಅನುಭವಿಸಿದ್ದಾರೆ. ಬಲವಾದ ಗಾಳಿಗೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕೆಲವೆಡೆ ವಾಹನಗಳಲ್ಲಿ ಸಿಲುಕಿದ್ದವರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತಂದಿದ್ದಾರೆ. ಪೂರ್ವ ಮತ್ತು ಮಧ್ಯ ಭಾಗದ ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ, ಮೇರಿಲ್ಯಾಂಡ್ ಮತ್ತು ವರ್ಜೀನಿಯಾ ರಾಜ್ಯಗಳಲ್ಲಿ ವಿದ್ಯುತ್ ವ್ಯತ್ಯಯ ತೀವ್ರವಾಗಿದ್ದು, ಗುರುವಾರ ರಾತ್ರಿ ವೇಳೆಗೆ 9 ಲಕ್ಷಕ್ಕೂ ಹೆಚ್ಚು ಮನೆಗಳು ಮತ್ತು ವ್ಯಾಪಾರ ಕೇಂದ್ರಗಳಿಗೆ ವಿದ್ಯುತ್ ಕಡಿತಗೊಂಡಿದೆ.
ಹಬ್ಬದ ಆಚರಣೆಗಾಗಿ ಪ್ರಯಾಣಿಸುತ್ತಿದ್ದ ಜನರಿಗೂ ಸಂಕಷ್ಟ ಎದುರಾಗಿದ್ದು, ಫ್ಲೈಟ್‌ಅವೇರ್ ಮಾಹಿತಿ ಪ್ರಕಾರ 400ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ ಮತ್ತು 2,000ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ. ವಿಶೇಷವಾಗಿ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ವ್ಯತ್ಯಯ ಕಂಡುಬಂದಿದ್ದು, ರಸ್ತೆ ಮತ್ತು ರೈಲು ಸಂಚಾರಕ್ಕೂ ಅಡ್ಡಿಯಾಗಿದೆ.



















