ಟೆಹ್ರಾನ್: ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ 14 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ಪತಿಯೇ ಬರ್ಬರವಾಗಿ ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಇರಾನ್‌ನಲ್ಲಿ ನಡೆದಿದೆ. ತವರು ಮನೆಗೆ ಹೋಗಿ ಬರಲು ಅನುಮತಿ ಕೇಳಿದ್ದೇ ಈ ಭೀಕರ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಸೊಗಂದ್ ಮೊಶ್ತಾರೆಕಿ ಎಂಬ 14 ವರ್ಷದ ಬಾಲಕಿಯೇ ಮೃತ ದುರ್ದೈವಿಯಾಗಿದ್ದು, ಆರೋಪಿ 20 ವರ್ಷದ ಪತಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ‘ಇರಾನ್ ಮಾನವ ಹಕ್ಕುಗಳ ಸಂಸ್ಥೆ’ (IHR) ವರದಿ ಮಾಡಿದೆ.
ಅಪಘಾತದಿಂದ ಪಾರಾಗಿ ಬಂದವಳು ಪತಿಯ ಕ್ರೌರ್ಯಕ್ಕೆ ಬಲಿ
ಕೆರ್ಮನ್ ಪ್ರಾಂತ್ಯದ ನಿವಾಸಿಯಾಗಿದ್ದ ಸೊಗಂದ್ ಇತ್ತೀಚೆಗಷ್ಟೇ ಹೆರಿಗೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದ ಆಕೆ, ಮನೆಗೆ ಮರಳಿದ ಕೆಲವೇ ದಿನಗಳಲ್ಲಿ ಪತಿಯ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಆರೋಪಿ ಪತಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಪತಿ ಆಕೆಯನ್ನು ತವರು ಮನೆಯವರೊಂದಿಗೆ ಸಂಪರ್ಕದಲ್ಲಿರದಂತೆ ನಿರ್ಬಂಧಿಸಿದ್ದ ಮತ್ತು ತಾನು ಹೊರಗೆ ಹೋದಾಗಲೆಲ್ಲಾ ಆಕೆಯನ್ನು ಮನೆಯೊಳಗೆ ಕೂಡಿ ಹಾಕುತ್ತಿದ್ದ ಎಂಬ ಆಘಾತಕಾರಿ ವಿಷಯವೂ ಬೆಳಕಿಗೆ ಬಂದಿದೆ.
ಬಲವಂತದ ಮದುವೆ
ಇರಾನ್‌ನಲ್ಲಿರುವ ಬಲವಂತದ ಬಾಲ್ಯವಿವಾಹಗಳ ಭೀಕರ ಪರಿಣಾಮಗಳಿಗೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ದೇಶದಲ್ಲಿರುವ ತಾರತಮ್ಯದ ಕಾನೂನುಗಳು, ಪುರುಷಪ್ರಧಾನ ವ್ಯವಸ್ಥೆ ಮತ್ತು ಅಪರಾಧಿಗಳಿಗೆ ಶಿಕ್ಷೆಯ ಭಯವಿಲ್ಲದಿರುವುದೇ ಇಂತಹ ಹೀನ ಕೃತ್ಯಗಳು ಹೆಚ್ಚಾಗಲು ಕಾರಣ ಎಂದು ಐಎಚ್‌ಆರ್ ಕಿಡಿಕಾರಿದೆ. ಸೊಗಂದ್ ಹತ್ಯೆಯಾದ ದಿನವೇ ಫಾರ್ಸ್ ಪ್ರಾಂತ್ಯದಲ್ಲಿ ಸೆಪಿದೆಹ್ ರೈಸಿ ಎಂಬ 21 ವರ್ಷದ ಗರ್ಭಿಣಿಯನ್ನು ಆಕೆಯ ಪತಿಯೇ ಹತ್ಯೆ ಮಾಡಿರುವ ಘಟನೆಯೂ ವರದಿಯಾಗಿದೆ. ಈಕೆಯನ್ನೂ ಸಹ ಬಲವಂತವಾಗಿ ಮದುವೆ ಮಾಡಿಕೊಡಲಾಗಿತ್ತು ಎಂದು ತಿಳಿದುಬಂದಿದೆ.
ಹೆಚ್ಚುತ್ತಿರುವ ಮರ್ಯಾದಾ ಹತ್ಯೆ ಪ್ರಕರಣಗಳು
ಇರಾನ್‌ನಲ್ಲಿ ಮಹಿಳೆಯರ ಮೇಲಿನ ಇಂತಹ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಇದೇ ತಿಂಗಳ ಆರಂಭದಲ್ಲಿ ಪಶ್ಚಿಮ ಇರಾನ್‌ನ ಸನಂದಜ್ ನಗರದಲ್ಲಿ ಹೆಲಿಯಾ ಫತ್ತಾಹಿ ಎಂಬ 19 ವರ್ಷದ ಗರ್ಭಿಣಿಯನ್ನು ಆಕೆಯ ಪೋಷಕರೇ ಮರ್ಯಾದಾ ಹತ್ಯೆ ಮಾಡಿದ್ದರು. ಯುವಕನೊಬ್ಬನ ಜೊತೆಗಿನ ಸಂಬಂಧದಿಂದ ತಾನು ಎರಡು ತಿಂಗಳ ಗರ್ಭಿಣಿಯಾಗಿರುವ ವಿಷಯವನ್ನು ಆಕೆ ಮನೆಯಲ್ಲಿ ತಿಳಿಸಿದ್ದಳು. ಇದರಿಂದ ಕೋಪಗೊಂಡ ಪೋಷಕರಾದ ವೋರಿಯಾ ಫತ್ತಾಹಿ ಮತ್ತು ಲೀಲಾ ವೀಸ್, ಮಗಳಿಗೆ ಬಲವಂತವಾಗಿ ಸುಮಾರು 30 ನಿದ್ರೆ ಮಾತ್ರೆಗಳನ್ನು ನುಂಗಿಸಿ, ತೀವ್ರವಾಗಿ ಹಲ್ಲೆ ನಡೆಸಿ ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.


















