ಗೆಲ್ಸೆಂಕಿರ್ಚೆನ್: ಮಕ್ಕಳಿಲ್ಲದೆ ಆಟದ ಮೈದಾನದ ಬೆಂಚ್ ಮೇಲೆ ಕುಳಿತು ಏಕಾಂಗಿಯಾಗಿ ಕುಳಿತು ಅಳುತ್ತಿದ್ದ ಮಹಿಳೆಯೊಬ್ಬರಿಗೆ ಸ್ಥಳೀಯ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದ ವಿಚಿತ್ರ ಘಟನೆ ಜರ್ಮನಿಯಲ್ಲಿ ನಡೆದಿದೆ. ಅ.25ರಂದು ಗೆಲ್ಸೆಂಕಿರ್ಚೆನ್‌ನಲ್ಲಿ (Gelsenkirchen) ಈ ಘಟನೆ ನಡೆದಿದ್ದು, 31 ವರ್ಷದ ಹನಾ (Hana) ಎಂಬ ಮಹಿಳೆ 25 ಯುರೋ (ಸುಮಾರು 2,540 ರೂ.) ದಂಡ ಕಟ್ಟಬೇಕಾಗಿ ಬಂದಿದೆ. ಅಧ್ಯಯನ ಮತ್ತು ಆರ್ಥಿಕ ತೊಂದರೆಗಳ ವಿಪರೀತ ಒತ್ತಡದಲ್ಲಿದ್ದ ಹನಾ, ಸ್ವಲ್ಪ ಹೊತ್ತು ನೆಮ್ಮದಿಯಾಗಿ ಇರಲು ವಾಕ್ ಹೊರಟಿದ್ದರು. ಈ ವೇಳೆ ಆಟದ ಮೈದಾನದ ಬೆಂಚ್ ಮೇಲೆ ಕುಳಿತು ತಮ್ಮ ಚಿಕ್ಕಮ್ಮನಿಗೆ ಕರೆ ಮಾಡಿದ್ದರಲ್ಲದೆ, ದುಃಖ ತಡೆಯಲಾರದೆ ಕಣ್ಣೀರು ಹಾಕಿದ್ದಾರೆ. ಯಾರ ಕಣ್ಣಿಗೂ ಕಾಣಿಸದೆ ಒಬ್ಬಂಟಿಯಾಗಿ ಸ್ವಲ್ಪ ಹೊತ್ತು ಇರಬೇಕೆಂಬುದು ಅವರ ಉದ್ದೇಶವಾಗಿತ್ತು ಎಂದು ಜರ್ಮನ್ ಸುದ್ದಿವಾಹಿನಿ ಡಬ್ಲ್ಯೂಡಿಆರ್‌ಗೆ ತಿಳಿಸಿದ್ದಾರೆ.
ಮಕ್ಕಳಿಲ್ಲದೆ ಕುಳಿತಿದ್ದಕ್ಕೆ ಬಿದ್ದ ದಂಡ
ಹನಾ ಬೆಂಚ್ ಮೇಲೆ ಕುಳಿತಿದ್ದಾಗ ಮೂವರು ನಗರಸಭೆ ಅಧಿಕಾರಿಗಳು ಅಲ್ಲಿಗೆ ಬಂದು, ಜೋಕಾಲಿಯಲ್ಲಿ ಆಟವಾಡುತ್ತಿದ್ದ ಇಬ್ಬರು ಹುಡುಗರು ನಿಮ್ಮ ಮಕ್ಕಳೇ ಎಂದು ಪ್ರಶ್ನಿಸಿದ್ದಾರೆ. ತಮ್ಮ ಮಕ್ಕಳಲ್ಲ ಎಂದು ಹನಾ ಉತ್ತರಿಸಿದ ತಕ್ಷಣ, ಅಧಿಕಾರಿಗಳು ಅವರಿಗೆ 25 ಯುರೋ ದಂಡ ವಿಧಿಸಿದ್ದಾರೆ. ಮಕ್ಕಳಿಲ್ಲದೆ ಆಟದ ಮೈದಾನದಲ್ಲಿ ಕುಳಿತುಕೊಳ್ಳುವುದು ನಗರಸಭೆ ನಿಯಮದ ಪ್ರಕಾರ ತಪ್ಪು ಎಂಬ ಅರಿವು ಹನಾ ಅವರಿಗೆ ಇರಲಿಲ್ಲ. ಗೆಲ್ಸೆಂಕಿರ್ಚೆನ್ ನಗರಸಭೆಯ ನಿಯಮದ ಪ್ರಕಾರ, ಆಟದ ಮೈದಾನಗಳು 14 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾತ್ರ ಮೀಸಲಾಗಿವೆ. ಪೋಷಕರು ಅಥವಾ ಪಾಲಕರು ಸೇರಿದಂತೆ ವಯಸ್ಕರು ಮಕ್ಕಳ ಜೊತೆಗಿದ್ದರೆ ಮಾತ್ರ ಅಲ್ಲಿರಲು ಅವಕಾಶವಿದೆ.
ಮಾನವೀಯತೆ ಎಲ್ಲಿ ಹೋಯಿತು ಎಂದು ಹನಾ ಆಕ್ರೋಶ
ಅಧಿಕಾರಿಗಳ ಈ ಕ್ರಮದಿಂದ ಹನಾ ತೀವ್ರ ಕೋಪ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. “ಇದರಲ್ಲಿ ಮಾನವೀಯತೆ ಎಲ್ಲಿ ಹೋಯಿತು? ಯಾರಾದರೂ ಅಳುತ್ತಿರುವುದನ್ನು ಕಂಡಾಗ ಮೊದಲು ‘ನೀವು ಚೆನ್ನಾಗಿದ್ದೀರಾ? ನಿಮಗೆ ಸಹಾಯ ಬೇಕೇ?’ ಎಂದು ಕೇಳಬಾರದೇ? ಆಮೇಲೆ ಮಕ್ಕಳಿಲ್ಲದೆ ಇಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ವಿವರಿಸಬಹುದಿತ್ತಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ. ಸ್ಥಳೀಯ ನಿವಾಸಿಗಳೂ ಅಧಿಕಾರಿಗಳ ನಡೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಬಯಸಿದ ಮಹಿಳೆಗೆ ಶಿಕ್ಷೆ ವಿಧಿಸುವುದು ವಿವೇಚನಾರಹಿತ. ನಾನು 64 ವರ್ಷಗಳಿಂದ ಇಲ್ಲಿದ್ದೇನೆ, ಯಾವಾಗಲೂ ಬೆಂಚ್ ಮೇಲೆ ಕುಳಿತುಕೊಳ್ಳುತ್ತೇನೆ. ಯಾರೂ ಎಂದೂ ಬಂದು ವಿಚಾರಿಸಿಲ್ಲ” ಎಂದು ಹಿರಿಯ ಮಹಿಳೆಯೊಬ್ಬರು ಹೇಳಿದ್ದಾರೆ. ಮತ್ತೊಬ್ಬ ಸ್ಥಳೀಯರು ಇದನ್ನು ಖಂಡನೀಯ ಎಂದಿದ್ದಾರೆ.
ಮಕ್ಕಳ ರಕ್ಷಣೆಗಾಗಿ ನಿಯಮ: ಸಿಟಿ ಕೌನ್ಸಿಲ್ ಸಮರ್ಥನೆ
ಆದರೆ ಅಧಿಕಾರಿಗಳ ನಿರ್ಧಾರವನ್ನು ಸಿಟಿ ಕೌನ್ಸಿಲ್ ಸಮರ್ಥಿಸಿಕೊಂಡಿದೆ. “ಮಕ್ಕಳ ಆಟದ ಮೈದಾನಗಳು ಮಕ್ಕಳಿಗಾಗಿ ಇರುವಂಥವು. ಆದ್ದರಿಂದ ವಯಸ್ಕರು ಮಕ್ಕಳಿಲ್ಲದೆ ಅಲ್ಲಿರುವುದನ್ನು ನಿಷೇಧಿಸಲಾಗಿದೆ” ಎಂದು ಕೌನ್ಸಿಲ್ ಸದಸ್ಯ ಸೈಮನ್ ನೊವಾಕ್ ತಿಳಿಸಿದ್ದಾರೆ. ಆಟದ ಮೈದಾನಗಳ ಅನಧಿಕೃತ ಬಳಕೆಯನ್ನು ತಡೆಯಲು ಮತ್ತು ಮಕ್ಕಳ ಅಪಹರಣದ ಅಪಾಯವನ್ನು ಕಡಿಮೆ ಮಾಡಲು ಈ ದಂಡದ ಕ್ರಮ ಜಾರಿಯಲ್ಲಿದೆ ಎಂದು ಆಡಳಿತ ಸ್ಪಷ್ಟಪಡಿಸಿದೆ. ಇದೇ ವೇಳೆ, ಬೆಂಚ್ ಮೇಲೆ ಒಬ್ಬಂಟಿಯಾಗಿ ಕುಳಿತುಕೊಳ್ಳುವುದು ಸೇರಿದಂತೆ ಆಟದ ಮೈದಾನಗಳ ಅನಧಿಕೃತ ಬಳಕೆಗೆ ವಿಧಿಸುವ ದಂಡವನ್ನು ಈಗಿರುವ 55 ಯುರೋಗಳಿಂದ (ಸುಮಾರು 5,613 ರೂ.) 60 ಯುರೋಗಳಿಗೆ (ಸುಮಾರು 6,121 ರೂ.) ಹೆಚ್ಚಿಸುವ ಪ್ರಸ್ತಾವನೆಯ ಕುರಿತೂ ಕೌನ್ಸಿಲ್‌ನಲ್ಲಿ ಚರ್ಚೆ ನಡೆಯುತ್ತಿದೆ.



















