ಮಾಸ್ಕೋ: ಅಂತಾರಾಷ್ಟ್ರೀಯ ಕೃತಕ ಬುದ್ಧಿಮತ್ತೆ (AI) ಸಮ್ಮೇಳನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಕೇರಳದ 17 ವರ್ಷದ ಯುವ ಉದ್ಯಮಿ ರಾಹುಲ್ ಜಾನ್ ಅಜು ತೆಗೆದುಕೊಂಡ ಸೆಲ್ಫಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವಿಶೇಷ ಕ್ಷಣದ ಫೋಟೋವನ್ನು ರಾಹುಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. “ಇದನ್ನು ಅರಗಿಸಿಕೊಳ್ಳಲು ಇನ್ನೂ ಪ್ರಯತ್ನಿಸುತ್ತಿದ್ದೇನೆ. ಸುಮ್ಮನೆ ಮೋಜಿಗೆ ವಿಡಿಯೋ ಮಾಡುತ್ತಿದ್ದ ಪುಟ್ಟ ಹುಡುಗನಿಂದ ಹಿಡಿದು, 17ನೇ ವಯಸ್ಸಿನಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗುವವರೆಗೆ, ನಾನು ಕನಸು ಕಾಣಲೂ ತಿಳಿಯದ ಅವಕಾಶಗಳನ್ನು ಬದುಕು ನನಗೆ ನೀಡಿತು” ಎಂದು ಅವರು ಭಾವುಕವಾಗಿ ಬರೆದುಕೊಂಡಿದ್ದಾರೆ. ಗುರುವಾರ ಆರಂಭವಾದ ಮೂರು ದಿನಗಳ ‘ಎಐ ಜರ್ನಿ 2026’ (AI Journey 2026) ಸಮ್ಮೇಳನದಲ್ಲಿ ಈ ಘಟನೆ ನಡೆದಿದೆ.
ರಷ್ಯಾ ಮಾಧ್ಯಮಗಳ ವರದಿ ಪ್ರಕಾರ, ಸಮ್ಮೇಳನದ ಸಮಗ್ರ ಅಧಿವೇಶನದ (plenary session) ಬಳಿಕ ಪುಟಿನ್ ಅವರೊಂದಿಗೆ ರಾಹುಲ್ ಸಂವಾದ ನಡೆಸಿದ್ದಾರೆ. ‘ಥಿಂಕ್ಕ್ರಾಫ್ಟ್’ (ThinkCraft) ಪ್ಲಾಟ್ಫಾರ್ಮ್ ರಚಿಸಿದ ಶಾಲಾ ಬಾಲಕ ಎಂದು ರಾಹುಲ್ರನ್ನು ರಷ್ಯಾ ರಾಯಭಾರ ಕಚೇರಿ ಶ್ಲಾಘಿಸಿದೆ. ಪುಟಿನ್ ಮಾತ್ರವಲ್ಲದೆ, ಕಜಕಿಸ್ತಾನ್ ಅಧ್ಯಕ್ಷ ಕಾಸಿಮ್-ಜೊಮಾರ್ಟ್ ತೊಕಾಯೆವ್ ಅವರೊಂದಿಗೂ ಮಾತುಕತೆ ನಡೆಸಿದ ಯುವ ಎಐ ಪ್ರತಿಭೆಗಳಲ್ಲಿ ರಾಹುಲ್ ಕೂಡ ಒಬ್ಬರು ಎಂದು ರಾಯಭಾರ ಕಚೇರಿ ತಿಳಿಸಿದೆ. ಭಾರತ, ಚೀನಾ, ರಷ್ಯಾ, ಸೆರ್ಬಿಯಾ, ಬ್ರೆಜಿಲ್, ಕೀನ್ಯಾ, ಕಜಕಿಸ್ತಾನ್ ಮತ್ತು ಯುಎಇ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿರುವ ಪ್ರಮುಖ ಜಾಗತಿಕ ವೇದಿಕೆ ಇದಾಗಿದೆ.
9ನೇ ವಯಸ್ಸಿನಲ್ಲಿ ಆರಂಭವಾದ ಎಐ ಪಯಣ
‘ಭಾರತದ ಎಐ ಬಾಲಕ’ (AI Kid of India) ಎಂದೇ ಜನಪ್ರಿಯವಾಗಿರುವ ರಾಹುಲ್, ಎಐ ಟೂಲ್ಗಳನ್ನು ಅಭಿವೃದ್ಧಿಪಡಿಸುವುದು, ತಂತ್ರಜ್ಞಾನದಲ್ಲಿ ತರಬೇತಿ ನೀಡುವುದು ಮತ್ತು ತಮ್ಮ ಆಸಕ್ತಿಯನ್ನೇ ಸ್ಟಾರ್ಟ್ಅಪ್ ಆಗಿ ರೂಪಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ತಂದೆಗೆ ಅಡೋಬ್ (Adobe) ಸಂಸ್ಥೆಯಲ್ಲಿ ಕೆಲಸ ಸಿಕ್ಕಾಗ, ಅಲ್ಲಿನ ಪ್ರೀಮಿಯಂ ಟೂಲ್ಗಳು ಉಚಿತವಾಗಿ ಲಭ್ಯವಾದವು. ವಿಡಿಯೋ ಎಡಿಟಿಂಗ್ ಮೂಲಕ ತಂತ್ರಜ್ಞಾನದ ಜಗತ್ತನ್ನು ಹೊಕ್ಕ ರಾಹುಲ್, ಅದರಿಂದಲೇ ಎಐ ಕಲಿಯಲು ಸಾಧ್ಯವಾಯಿತು. ಶಾಲಾ ವಿಜ್ಞಾನ ಯೋಜನೆಗಾಗಿ ‘ಮೀಬಾಟ್’ ಎಂಬ ರೋಬೋಟ್ ಕೂಡ ರೂಪಿಸಿದ್ದರು. ಒಂಬತ್ತನೇ ವಯಸ್ಸಿನಲ್ಲಿ ಸ್ವಂತವಾಗಿ ಎಐ ಕಲಿತ ಅವರ ಪಯಣ, ಇಂದು ‘ಎಐ ರೆಲ್ಮ್ ಟೆಕ್ನಾಲಜೀಸ್’ ಎಂಬ ಸ್ಟಾರ್ಟ್ಅಪ್ ಸ್ಥಾಪಿಸುವ ಹಂತಕ್ಕೆ ಬೆಳೆದಿದೆ. ಈ ಸಂಸ್ಥೆಯಲ್ಲಿ ಸದ್ಯ 15 ಮಂದಿ ಕಾರ್ಯನಿರ್ವಹಿಸುತ್ತಿದ್ದು, ವಿಶ್ವದಾದ್ಯಂತ ಸುಮಾರು ಐದು ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ.
ಅಪ್ಪನಿಗೆ ತಿಂಗಳಿಗೆ 2 ಲಕ್ಷ ರೂ. ಸಂಬಳ
ರಾಹುಲ್ ಅವರ ಜೀವನದ ಕುತೂಹಲಕಾರಿ ಸಂಗತಿಯೆಂದರೆ, ಹೆಚ್ಚಿನ ಹದಿಹರೆಯದವರು ತಮ್ಮ ತಂದೆಯ ಬಳಿ ಪಾಕೆಟ್ ಮನಿ ಕೇಳುವ ವಯಸ್ಸಿನಲ್ಲಿ, ರಾಹುಲ್ ಅವರ ತಂದೆಯೇ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ರಾಹುಲ್ ತಮ್ಮ ತಂದೆಗೆ ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳ ನೀಡುತ್ತಿದ್ದಾರೆ ಎಂಬುದು ವಿಶೇಷ.


















