ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹೀನಾಯವಾಗಿ ಸೋಲನ್ನು ಅನುಭವಿಸಿ ಬಿಜೆಪಿ ಭಾರೀ ಬಹುಮತದ ಗೆಲುವು ಸಾಧಿಸಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮಮತಾ ಬ್ಯಾನರ್ಜಿ ಒಪ್ಪುತ್ತಿಲ್ಲ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
“ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಅನ್ಯಾಯವಾಗಿದೆ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ನ್ಯಾಯಯುತವಾಗಿ ಚುನಾವಣೆ ನಡೆದಿದ್ದರೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ. ಆದರೆ ಈಗ ರಾಜಭವನಕ್ಕೆ ಹೋಗುವ ಮಾತೇ ಇಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ. ನಾವು ಚುನಾವಣೆಯಲ್ಲಿ ಸೋತಿಲ್ಲ. ಮರು ಮತ ಎಣಿಕೆ ನಡೆಯಬೇಕು. ಅಲ್ಲಿಯವರೆಗೂ ನಾನೂ ರಾಜೀನಾಮೆ ನೀಡುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ನು, ಚುನಾವಣಾ ಆಯೋಗದ ಕೆಲಸದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಅವರ ಹಸ್ತಕ್ಷೇಪದ ಬಗ್ಗೆ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. “ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಲೂಟಿ ಮಾಡಲು ಮತ್ತು ಇವಿಎಂ ಅನ್ನು ಲೂಟಿ ಮಾಡಲು ಚುನಾವಣಾ ಆಯೋಗ ಈ ಚುನಾವಣೆಯಲ್ಲಿ ವಿಲನ್ ಆಗಿದೆ. ಮತದಾನದ ನಂತರ ಇವಿಎಂ ಹೇಗೆ 80-90% ಚಾರ್ಜ್ ಆಗಿದೆ ಎಂದು ಯಾರಾದರೂ ನನಗೆ ತಿಳಿಸುತ್ತೀರಾ? ಅದು ಹೇಗೆ ಸಾಧ್ಯ? ಬಿಜೆಪಿ ನೇರವಾಗಿ ಚುನಾವಣಾ ಆಯೋಗದೊಂದಿಗೆ ಆಟವಾಡಿತು. ಇದು ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವಿನ ಬೆಟ್ಟಿಂಗ್. ಈ ಚುನಾವಣಾ ಅಕ್ರಮದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರೂ ಭಾಗಿಯಾಗಿದ್ದಾರೆ. ನನ್ನ ಜೀವನದಲ್ಲಿ ನಾನು ಈ ರೀತಿಯ ಚುನಾವಣೆಯನ್ನು ನೋಡಿಲ್ಲ.” ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಇದನ್ನೂ ಓದಿ : ಬಂಗಾಳ, ಅಸ್ಸಾಂನಲ್ಲಿ ಕೇಂದ್ರ ಚುನಾವಣಾ ಆಯುಕ್ತರಿಂದ ಬಿಜೆಪಿ ಗೆದ್ದಿದೆ : ಸಂತೋಷ್ ಲಾಡ್


















