ಲಂಡನ್: ಇತರರ ಸಹಾಯಕ್ಕೆ ಧಾವಿಸುವಾಗ ಜಾಗರೂಕತೆ ಇಲ್ಲದಿದ್ದರೆ ಎಂತಹ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಬ್ರಿಟನ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಉತ್ತರ ಯಾರ್ಕ್‌ಶೈರ್‌ನ ಸ್ಕಾರ್‌ಬರೋ ಸಮುದ್ರ ತೀರದಲ್ಲಿ ಸಿಲುಕಿಕೊಂಡಿದ್ದ ಸರಕು ಸಾಗಣೆ ವ್ಯಾನ್ ಒಂದನ್ನು ರಕ್ಷಿಸಲು ಹೋದ ಐಷಾರಾಮಿ ರೇಂಜ್ ರೋವರ್ ಕಾರು, ಸ್ವತಃ ತಾನೇ ಮರಳಿನಲ್ಲಿ ಸಿಲುಕಿ ಕೊನೆಗೆ ಸಮುದ್ರದ ಪಾಲಾದ ಘಟನೆ ನಡೆದಿದೆ. ಸುಮಾರು 1.49 ಕೋಟಿ ರೂಪಾಯಿ ಮೌಲ್ಯದ ಈ ಐಷಾರಾಮಿ ಎಸ್‌ಯುವಿ ಕಾರು ಸಮುದ್ರ ಪಾಲಾಗುತ್ತಿರುವ ದೃಶ್ಯಗಳು ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಶುಕ್ರವಾರ ಸಂಜೆ ಸ್ಕಾರ್‌ಬರೋ ಬೀಚ್‌ನ ಮರಳಿನಲ್ಲಿ ಸರಕು ಸಾಗಣೆ ವ್ಯಾನ್ ಒಂದು ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ ರೇಂಜ್ ರೋವರ್ ಕಾರಿನ ಮಾಲೀಕರು, ತಮ್ಮ ಶಕ್ತಿಶಾಲಿ ವಾಹನದ ಮೂಲಕ ವ್ಯಾನ್ ಅನ್ನು ಎಳೆದು ಹೊರತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯ ಮೀನುಗಾರರು ಮತ್ತು ನಿವಾಸಿಗಳು, ಸಮುದ್ರದ ಅಲೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿ ಕಾರಿನ ಮಾಲೀಕರಿಗೆ ಮುನ್ನೆಚ್ಚರಿಕೆ ನೀಡಿದ್ದರು. ಅಲ್ಲದೆ ತೀರದಲ್ಲಿದ್ದ ಜೆಟ್ ಸ್ಕೀಗಳ (ಜಲ ಬೈಕ್) ಸಹಾಯದಿಂದ ವ್ಯಾನ್ ಅನ್ನು ಸುರಕ್ಷಿತವಾಗಿ ಹೊರತೆಗೆಯುವಂತೆ ಸಲಹೆ ನೀಡಿದ್ದರು. ಆದರೆ, ಯಾರ ಮಾತನ್ನೂ ಕೇಳದ ಕಾರಿನ ಮಾಲೀಕರು ಸ್ಥಳೀಯರ ಸಲಹೆಯನ್ನು ತಿರಸ್ಕರಿಸಿ, ತಮಗೆ ಎಲ್ಲವೂ ಗೊತ್ತು ಎಂಬಂತೆ ನಡೆದುಕೊಂಡು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದರು.
ಕಡಲಿನ ಒಡಲು ಸೇರಿದ ಕಾರುಗಳು
ಹಾಸ್ಯಾಸ್ಪದ ವಿಷಯವೆಂದರೆ, ಕೋಟ್ಯಂತರ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರಿನಲ್ಲಿ ಮರಳಿನ ರಸ್ತೆಗೆ ಹೊಂದುವ ವಿಶೇಷ ‘ಸ್ಯಾಂಡ್ ಡ್ರೈವಿಂಗ್ ಮೋಡ್’ ಇದ್ದಾಗ್ಯೂ, ವ್ಯಾನ್ ಅನ್ನು ಎಳೆಯುವ ಭರದಲ್ಲಿ ಅದು ಕೂಡ ಮರಳಿನ ಆಳಕ್ಕೆ ಸಿಲುಕಿಕೊಂಡಿತು. ವಾಹನಗಳು ಮತ್ತಷ್ಟು ಹೂತುಹೋಗುತ್ತಿದ್ದಂತೆ ಗಾಬರಿಗೊಂಡ ಅಲ್ಲಿದ್ದ ಜನರು, ಮಕ್ಕಳ ಆಟದ ಪ್ಲಾಸ್ಟಿಕ್ ಚಮಚದಿಂದ (Spade) ಮರಳನ್ನು ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಅಷ್ಟರಲ್ಲೇ ಕತ್ತಲಾಗುತ್ತಾ ಸಮುದ್ರದಲ್ಲಿ ಭಾರಿ ಅಲೆಗಳು ದಡದತ್ತ ನುಗ್ಗಿ ಬಂದವು. ನೋಡನೋಡುತ್ತಿದ್ದಂತೆ ರೇಂಜ್ ರೋವರ್ ಮತ್ತು ವ್ಯಾನ್ ಎರಡೂ ಸಮುದ್ರದ ನೀರಿನಲ್ಲಿ ಮುಳುಗಡೆಯಾದವು. ರಾತ್ರಿ 10.30ರ ಸುಮಾರಿಗೆ ಇವೆರಡೂ ವಾಹನಗಳ ಮೇಲ್ಛಾವಣಿ ಮತ್ತು ಕೇವಲ ಆಂಟೆನಾ ಮಾತ್ರ ನೀರಿನ ಮೇಲೆ ಕಾಣಿಸುತ್ತಿದ್ದವು ಎಂದು ಪ್ರತ್ಯಕ್ಷದರ್ಶಿ ಸ್ಯಾಮಿ ಹೆಲ್ಲೆವೆಲ್ ತಿಳಿಸಿದ್ದಾರೆ.
ವಿಮೆಯೂ ರದ್ದು, ದಂಡದ ಬಿಸಿ!
ಬೀಚ್‌ನಲ್ಲಿದ್ದ ಜೆಟ್ ಸ್ಕೀಗಳನ್ನು ಹೇಗೋ ಮಾಡಿ ರಕ್ಷಿಸಲಾಯಿತಾದರೂ, ಕಾರುಗಳನ್ನು ನೀರಿನಿಂದ ಹೊರತೆಗೆಯಲು ಸಾಧ್ಯವಾಗಲಿಲ್ಲ. ನಂತರ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಸಮುದ್ರದ ಅಲೆಗಳು ತಗ್ಗುವವರೆಗೂ ಕಾಯಬೇಕಾಯಿತು. ಅಲೆಗಳು ಕಡಿಮೆಯಾದ ನಂತರ ಎರಡೂ ವಾಹನಗಳನ್ನು ಟೋಯಿಂಗ್ ಟ್ರಕ್ ಮೂಲಕ ತೀರಕ್ಕೆ ತರಲಾಗಿದೆ. ಆದರೆ, ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿರುವುದರಿಂದ ಇವೆರಡೂ ವಾಹನಗಳು ಸಂಪೂರ್ಣ ಹಾಳಾಗಿವೆ. ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ರಕ್ಷಣಾ ಅಧಿಕಾರಿಗಳು, ಮಾಲೀಕರ ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆಯಿಂದಾಗಿ ಈ ಅವಘಡ ಸಂಭವಿಸಿರುವುದರಿಂದ ಈ ವಾಹನಗಳಿಗೆ ವಿಮೆಯೂ ಸಿಗುವುದಿಲ್ಲ. ಜೊತೆಗೆ ಬೀಚ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಮಾಲೀಕರಿಗೆ ಭಾರಿ ಮೊತ್ತದ ದಂಡ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಮಾಲೀಕರ ಈ ಮೊಂಡುತನದ ನಿರ್ಧಾರವನ್ನು ಸ್ಥಳೀಯರು “ಅತ್ಯಂತ ಮೂರ್ಖತನದ ಪರಮಾವಧಿ” ಎಂದಿದ್ದಾರೆ.



















