ಬೆಂಗಳೂರು : ಬೆಂಗಳೂರಿನ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರ ಪ್ರಕರಣ ಸಂಬಂಧಿಸಿದಂತೆ ಪೊಲೀಸರಿಗೆ ದೊಡ್ಡ ಸವಾಲಾಗಿ ಉಳಿದಿದೆ. ಸೆಕೆಂಡ್ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಮತ್ತು ಜ್ಯೂನಿಯರ್ ತೇಜಸ್ವಿನಿ ಜನವರಿ 31ರಂದು ಮನೆ ಬಿಟ್ಟು ಹೊರಟು ನಾಪತ್ತೆಯಾಗಿದ್ದಾರೆ.
ಪ್ರಕರಣವನ್ನು ಭೇದಿಸಲು ಹತ್ತು ಮಂದಿಯ ವಿಶೇಷ ತಂಡವನ್ನು ರಚಿಸಲಾಗಿದ್ದು, 70 ದಿನಗಳಿಗೂ ಹೆಚ್ಚು ಕಾಲ ಶೋಧ ಕಾರ್ಯಾಚರಣೆ ನಡೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇದೀಗ 75 ದಿನ ಕಳೆದರೂ ಪೊಲೀಸರಿಗೆ ಸಣ್ಣ ಮಾಹಿತಿ ಕೂಡ ಲಭ್ಯವಾಗಿಲ್ಲ.
ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು ಸೇರಿದಂತೆ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ತಲಾಶ್ ನಡೆಸಿದ್ದಾರೆ. ಕೇರಳದಲ್ಲೂ ವಿಶೇಷ ತಂಡ ಬೀಡುಬಿಟ್ಟು ಶೋಧ ಮುಂದುವರೆಸಿದೆ. ವಿದ್ಯಾರ್ಥಿನಿಯರು ಮೊಬೈಲ್ ಫೋನ್ ಅಥವಾ ಎಟಿಎಂ ಕಾರ್ಡ್ ಬಳಸದೇ ಇದ್ದು, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಯಾವುದೇ ಸಂಪರ್ಕವೂ ಹೊಂದಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಮಲೆಮಹದೇಶ್ವರ ಬೆಟ್ಟದವರೆಗೆ ಅವರ ಸುಳಿವು ಸಿಕ್ಕಿದ್ದರೂ, ಅಲ್ಲಿಗೆ ಪೊಲೀಸರು ತಲುಪುವಷ್ಟರಲ್ಲಿ ಅವರು ಮತ್ತೆ ನಾಪತ್ತೆಯಾಗಿದ್ದಾರೆ. ಬಳಿಕ ಅವರು ಎಲ್ಲಿಗೆ ತೆರಳಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕುಟುಂಬಸ್ಥರು ನೀಡಿದ ಮಾಹಿತಿಯ ಆಧಾರದ ಮೇಲೆ ಅವರ ಇಷ್ಟದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಕೇವಲ 3000 ರೂಪಾಯಿಯೊಂದಿಗೆ ಮನೆ ಬಿಟ್ಟಿದ್ದರೂ ಇಷ್ಟು ದಿನ ಅಜ್ಞಾತವಾಗಿರುವುದು ಕುತೂಹಲ ಮೂಡಿಸಿದೆ.
ಯಾವುದೇ ಅಪಘಾತ ಅಥವಾ ಅನುಮಾನಾಸ್ಪದ ಪ್ರಕರಣಗಳು ದಾಖಲಾಗಿಲ್ಲ. ಹೀಗಾಗಿ ಅವರು ಸ್ವಯಂ ತಲೆಮರೆಸಿಕೊಂಡಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪರೀಕ್ಷೆ ಭಯದಿಂದ ಮನೆ ಬಿಟ್ಟು ಹೋಗಿರುವ ಸಾಧ್ಯತೆ ವ್ಯಕ್ತವಾಗಿದ್ದು, ರಾಜ್ಯದೊಳಗೆ ಆಧಾರ್ ಕಾರ್ಡ್ ಬಳಸಿ ಉಚಿತ ಬಸ್ ಪ್ರಯಾಣ ಮಾಡಿರುವುದು ಬೆಳಕಿಗೆ ಬಂದಿದೆ. ಈ ನಡುವೆ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ವಿದ್ಯಾರ್ಥಿನಿಯರನ್ನು ಪತ್ತೆಹಚ್ಚಲು ನೀಡಿದ ಗಡುವು ಮುಗಿದು ಒಂದು ತಿಂಗಳು ಕಳೆದಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ : ಲಂಡನ್ ಮಹಿಳೆ ನಂಬಿದ ಪಾಂಡುಗೆ 1.13 ಲಕ್ಷ ಪಂಗನಾಮ..!



















