ಮೈಸೂರು : ಮದುವೆಯಾಗಿ ಕೇವಲ 15 ದಿನಗಳಷ್ಟೇ ಆಗಿದ್ದ ನವವಧು ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ಮೈಸೂರಿನಲ್ಲಿ ನಡೆದಿದೆ. ಹೆಲ್ಮೆಟ್ ಧರಿಸದಿದ್ದ ಕಾರಣ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೇಘನಾ (20) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಮೇಘನಾ ಮೂಲತಃ ಮೂಕನಹುಂಡಿ ಗ್ರಾಮದವರಾಗಿದ್ದು, ಇತ್ತೀಚೆಗೆ ನಂಜನಗೂಡು ತಾಲೂಕಿನ ಬಿದರಗೂಡು ಗ್ರಾಮದ ಪುನೀತ್ ಅವರೊಂದಿಗೆ ವಿವಾಹವಾಗಿದ್ದರು. ಮದುವೆಯಾಗಿ ಇನ್ನೂ 15 ದಿನಗಳಷ್ಟೇ ಕಳೆದಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಆರ್.ಟಿ.ನಗರದ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಮೇಘನಾ ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದ್ದು, ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ ಚಲಾಯಿಸುತ್ತಿದ್ದ ಪತಿ ಪುನೀತ್ ಅವರಿಗೂ ತಲೆ, ಕೈ ಮತ್ತು ಕಾಲಿನ ಭಾಗಗಳಿಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬಿ.ಸಿ.ರೋಡ್‌ನಲ್ಲಿ ಯುವತಿ ಹತ್ಯೆ ಪ್ರಕರಣ : ಆರೋಪಿ ಚೇತನ್ ಬಂಧನ!



















