ಬೆಂಗಳೂರು : ಮನೆ ಕಾಮಗಾರಿ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕಿತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಾರೆ ಮೇಸ್ತ್ರಿಯ ತಮ್ಮನನ್ನು ಹಲ್ಲೆ ಮಾಡಿ ಹತ್ಯೆ ಮಾಡಿದ ಆರೋಪದ ಮೇಲೆ ಮನೆ ಮಾಲೀಕ ದೇವರಾಜ್, ಆತನ ಮಗ ಸೇರಿದಂತೆ ನಾಲ್ವರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಡಬಗೆರೆ ನಿವಾಸಿ ದೇವರಾಜು ಅವರ ಮನೆ ನಿರ್ಮಾಣ ಕಾಮಗಾರಿಯನ್ನು ಗಾರೆ ಮೇಸ್ತ್ರಿ ಮಂಜುನಾಥ್ ಕೈಗೊಂಡಿದ್ದರು. ಮನೆಗೆ ಸಂಬಂಧಿಸಿದ ಸಂಪಿನ ಚೇಂಬರ್ ಕವರ್‌ನ್ನು ಸರಿಯಾಗಿ ನಿರ್ಮಿಸಿಲ್ಲ ಎಂಬ ಕಾರಣಕ್ಕೆ ದೇವರಾಜ್ ಅಸಮಾಧಾನಗೊಂಡಿದ್ದರು. ಇದೇ ವಿಚಾರವಾಗಿ ಮಂಜುನಾಥ್‌ಗೆ ಕರೆ ಮಾಡಿ, “ನಿನ್ನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಗಲಾಟೆ ನಡೆಸಿದ್ದಾನೆ ಎನ್ನಲಾಗಿದೆ.
ನಿನ್ನೆ ರಾತ್ರಿ ಸುಮಾರು 8.30ರ ವೇಳೆಗೆ ದೇವರಾಜ್, ಆತನ ಮಗ ಹಾಗೂ ಸ್ನೇಹಿತರು ಮಂಜುನಾಥ್ ಮನೆಗೆ ತೆರಳಿದ್ದರು. ಈ ವೇಳೆ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಮಂಜುನಾಥ್ ಪತ್ನಿ ಸಹಾಯಕ್ಕಾಗಿ ಮಂಜುನಾಥ್ ಅವರ ಸಹೋದರ ರವಿ (35) ಅವರನ್ನು ಕರೆಸಿಕೊಂಡಿದ್ದಾರೆ.
ರವಿ ಸ್ಥಳಕ್ಕೆ ಬಂದ ಕೂಡಲೇ ದೇವರಾಜ್ ಮತ್ತು ಆತನ ಜೊತೆಗಿದ್ದವರು ಏಕಾಏಕಿ ಮಂಜುನಾಥ್ ಹಾಗೂ ರವಿ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆಯರು ಬಿಡಿಸಲು ಮುಂದಾದರೂ ಆರೋಪಿಗಳು ಹಲ್ಲೆ ನಿಲ್ಲಿಸದೆ ಹಲ್ಲೆ ಮುಂದುವರಿಸಿದ್ದಾರೆ ಎನ್ನಲಾಗಿದೆ. ತೀವ್ರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇವರಾಜ್, ಆತನ ಮಗ ಸೇರಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಚಿತೆ ಮೇಲೆ ಮಲಗಿ, ಕುತ್ತಿಗೆಗೆ ಹಗ್ಗ ಬಿಗಿದು M.Pಯ ಬುಡಕಟ್ಟು ಜನಾಂಗ ಪ್ರತಿಭಟಿಸುತ್ತಿರುವುದೇಕೆ?


















