ಕೊಪ್ಪಳ: ಕೊಪ್ಪಳ ಜಿಲ್ಲೆಯ ನಾರಾಯಣಪೇಟೆ ಹಾಗೂ ರಾಜಾರಾಮಪೇಟೆ ಗ್ರಾಮಗಳ ಸರ್ಕಾರಿ ಜಮೀನಿನಲ್ಲಿ ರೆಸಾರ್ಟ್‌ಗಳು ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸಿ, ಜಮೀನನ್ನು ಸರ್ಕಾರದ ಭೌತಿಕ ಸ್ವಾಧೀನಕ್ಕೆ ಪಡೆಯುವಂತೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಪತ್ರದಲ್ಲಿ ತಿಳಿಸಿರುವಂತೆ, ಕೊಪ್ಪಳ ಉಪವಿಭಾಗಾಧಿಕಾರಿಗಳು 2026ರ ಜೂನ್ 16ರಂದು ನೀಡಿರುವ ಆದೇಶದಲ್ಲಿ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮದಡಿಯಲ್ಲಿ ನಾರಾಯಣಪೇಟೆ ಗ್ರಾಮದ 1 ಎಕರೆ ಹಾಗೂ ರಾಜಾರಾಮಪೇಟೆ ಗ್ರಾಮದ 6 ಎಕರೆ ಜಮೀನಿನ ಮಂಜೂರಾತಿಯನ್ನು ರದ್ದುಗೊಳಿಸಿ, ನಂತರ ನಡೆದ ಎಲ್ಲಾ ಪರಭಾರೆಗಳನ್ನು ಅಮಾನ್ಯವೆಂದು ಘೋಷಿಸಿ, ಜಮೀನನ್ನು “ಸರ್ಕಾರಿ ಪರಂಪೋಕು” ಹೆಸರಿನಲ್ಲಿ ಮರು ನೋಂದಾಯಿಸಿ ಸರ್ಕಾರದ ವಶಕ್ಕೆ ಪಡೆಯಲು ಆದೇಶಿಸಿರುವುದಾಗಿ ಉಲ್ಲೇಖಿಸಲಾಗಿದೆ.

ಅದೇ ರೀತಿ, ಪಿ.ಟಿ.ಸಿ.ಎಲ್. ಕಾಯ್ದೆಯಡಿ ನಾರಾಯಣಪೇಟೆ ಗ್ರಾಮದ ಜಮೀನುಗಳನ್ನು ಮೂಲ ಮಂಜೂರಿದಾರರು ಮತ್ತು ಅವರ ವಾರಸುದಾರರಿಗೆ ಮರು ಹಸ್ತಾಂತರಿಸಿ ಭೌತಿಕ ಸ್ವಾಧೀನ ನೀಡುವಂತೆ ಉಪವಿಭಾಗಾಧಿಕಾರಿಗಳು ಆದೇಶಿಸಿರುವುದನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟಾದರೂ ಆದೇಶ ಜಾರಿಯಾಗದೆ, ಸರ್ಕಾರದ ವಶಕ್ಕೆ ಪಡೆಯಬೇಕಾದ ಜಮೀನುಗಳಲ್ಲಿ ಹಂಪಿ ಫೆದರ್ಸ್ ರೆಸಾರ್ಟ್ಸ್, ಹಂಪಿ ವಿಸ್ಕರ್ಸ್ ರೆಸಾರ್ಟ್ಸ್ ಹಾಗೂ ಹಂಪಿ ಬಾರ್ಡರ್ಸ್ ರೆಸಾರ್ಟ್ ಸೇರಿದಂತೆ ಖಾಸಗಿ ಸಂಸ್ಥೆಗಳು ಇನ್ನೂ ರೆಸಾರ್ಟ್, ಹೋಟೆಲ್ ಹಾಗೂ ಪ್ರವಾಸೋದ್ಯಮ ಸಂಬಂಧಿತ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.

ಉಪವಿಭಾಗಾಧಿಕಾರಿಗಳ ಆದೇಶ ಹೊರಬಿದ್ದ ನಂತರವೂ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಜಮೀನನ್ನು ಭೌತಿಕವಾಗಿ ಸರ್ಕಾರದ ವಶಕ್ಕೆ ಪಡೆಯುವ ಕ್ರಮ ಕೈಗೊಂಡಿಲ್ಲ. ಇದರಿಂದ ಸರ್ಕಾರದ ಆದೇಶ ಜಾರಿಯಲ್ಲಿ ಉದ್ದೇಶಪೂರ್ವಕ ವಿಳಂಬವಾಗಿದ್ದು, ಸರ್ಕಾರಿ ಆಸ್ತಿಯ ಅನಧಿಕೃತ ಬಳಕೆ ಮುಂದುವರಿದಿದೆ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಜಮೀನಿನಲ್ಲಿ ನಡೆಯುತ್ತಿರುವ ಎಲ್ಲಾ ರೆಸಾರ್ಟ್, ಹೋಟೆಲ್ ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸಿ, ಅಗತ್ಯವಿದ್ದಲ್ಲಿ ಕಟ್ಟಡಗಳಿಗೆ ಸೀಲ್ ಹಾಕಬೇಕು. ಜೊತೆಗೆ, ಆದೇಶ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಅಥವಾ ವಿಳಂಬ ತೋರಿದ ಅಧಿಕಾರಿಗಳ ವಿರುದ್ಧ ಇಲಾಖಾ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ದೇಶದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ


















