ಉಡುಪಿ : ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ರಾಮಕ್ಷತ್ರಿಯ ಸಂಘದ ವತಿಯಿಂದ 19ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವವು ಶನಿವಾರ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಅದ್ದೂರಿಯಾಗಿ ನೆರವೇರಿತು.

ಶನಿವಾರ ಬೆಳಿಗ್ಗೆ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಕರ್ಮಾರಂಭ ಧ್ವಜಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ 12.25ಕ್ಕೆ ಶುಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀಮದ್ ಸ್ವರ್ಣವಲ್ಲಿ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ವಿದ್ವಾನ್ ವೇ. ಕಟ್ಟೆ ತಿಮ್ಮಣ್ಣ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವವು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಈ ವರ್ಷದ ಕಲ್ಯಾಣೋತ್ಸವದ ಸೇವಾಕರ್ತರಾಗಿ ವಸಂತಿ ಮತ್ತು ಕೊತ್ವಾಲ್ ಪದ್ಮನಾಭ ಶೇರುಗಾರ ಹಾಗೂ ಅವರ ಮಕ್ಕಳು (ಗಂಗೊಳ್ಳಿ), ಉಷಾ ಮತ್ತು ನಾಗೇಶ್ ನಾಯಕ್, ಶ್ರುತಿ ಮತ್ತು ರಘುವೀರ ನಾಯಕ್ ಹಾಗೂ ಬಿಜೂರಿನ ನಾಯಕರಮನೆ ಕುಟುಂಬಸ್ಥರು ಸೇವೆ ಸಲ್ಲಿಸಿದರು.

ಸೀತಾರಾಮಚಂದ್ರ ಕಲ್ಯಾಣೋತ್ಸವದಲ್ಲಿ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಧಾರ್ಮಿಕ ಮತ್ತು ಸಾಮಾಜಿಕ ಸೇವಾಕರ್ತ ಬಿ. ರಾಮಕೃಷ್ಣ ಶೇರುಗಾರ್ (ಬಿಜೂರು), ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ, ಆಡಳಿತ ಮಂಡಳಿ ಸದಸ್ಯರು, ಮೊಕ್ತೇಸರರು, ಶ್ರೀ ರಾಮಕ್ಷತ್ರಿಯ ಸಂಘ ಬೈಂದೂರು ಅಧ್ಯಕ್ಷರು ಹಾಗೂ ಸದಸ್ಯರು, ಶ್ರೀ ರಾಮಕ್ಷತ್ರಿಯ ಯುವಕ ಸಮಾಜದ ಅಧ್ಯಕ್ಷರು ಮತ್ತು ಸದಸ್ಯರು, ಶ್ರೀ ರಾಮಕ್ಷತ್ರಿಯ ಮಾತೃ ಮಂಡಳಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ : 13 ವರ್ಷದ ಬಾಲಕಿ ಖೇರ್ವಾಗಢದ ಮೊದಲ ಮಹಿಳಾ ಉತ್ತರಾಧಿಕಾರಿ.. ರಜಪೂತ ರಾಜಮನೆತನದ ಸಂಪ್ರದಾಯ ಬ್ರೇಕ್!


















