ಪಾಲಿ (ರಾಜಸ್ಥಾನ) : ಶತಮಾನಗಳಷ್ಟು ಹಳೆಯದಾದ ರಾಜಮನೆತನವೊಂದು ತನ್ನ ಸಂಪ್ರದಾಯವನ್ನು ಇದೇ ಮೊದಲ ಬಾರಿಗೆ ಮುರಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಉತ್ತರಾಧಿಕಾರದ ಪದ್ಧತಿಯನ್ನು ಕೈಬಿಟ್ಟು, 13 ವರ್ಷದ ಬಾಲಕಿಯೊಬ್ಬಳನ್ನು ರಾಜಮನೆತನದ ಅಧಿಕೃತ ಉತ್ತರಾಧಿಕಾರಿಯಾಗಿ ಘೋಷಿಸಲಾಗಿದೆ. ಈ ಮೂಲಕ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಲಿಂಗ ಸಮಾನತೆಯತ್ತ ಇಟ್ಟಿರುವ ಈ ಅಪರೂಪದ ಹೆಜ್ಜೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
‘ಪಾಗ್ ಕಾ ದಸ್ತೂರ್’ ಪದ್ಧತಿಯಡಿ ಪಟ್ಟಾಭಿಷೇಕ
ಪಾಲಿ ಜಿಲ್ಲೆಯ ಖೇರ್ವಾ ಗ್ರಾಮದಲ್ಲಿ ಗುರುವಾರ ನಡೆದ ಸಾಂಪ್ರದಾಯಿಕ ‘ಪಾಗ್ ಕಾ ದಸ್ತೂರ್’ (Paag Ka Dastoor) ಸಮಾರಂಭದಲ್ಲಿ ಬರೀ 13 ವರ್ಷದ ಬಾಲಕಿ ತೇಜಸ್ವಿ ಕುಮಾರಿ ಜೋಧಾ ಅವರಿಗೆ ಖೇರ್ವಾಗಢ ವಂಶದ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ನೆರವೇರಿಸಲಾಯಿತು. ತಂದೆ ಹರೀಶ್ ಚಂದ್ರ ಜೋಧಾ ಅವರ ನಿಧನದ ಬಳಿಕ ಈ ಜವಾಬ್ದಾರಿ ತೇಜಸ್ವಿ ಅವರ ಹೆಗಲೇರಿದೆ. 17ನೇ ಶತಮಾನದ ಐತಿಹಾಸಿಕ ಖೇರ್ವಾ ಕೋಟೆಯಲ್ಲಿ ನಡೆದ ಈ ಸಮಾರಂಭಕ್ಕೆ ನೂರಾರು ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ. ಈ ಭಾಗದಲ್ಲಿ ರಜಪೂತ ಉತ್ತರಾಧಿಕಾರ ಪದ್ಧತಿಯಡಿ ಹೆಣ್ಣುಮಗಳೊಬ್ಬಳನ್ನು ಉತ್ತರಾಧಿಕಾರಿಯಾಗಿ ಗುರುತಿಸಿರುವುದು ಇದೇ ಮೊದಲು.

ವೇದ ಮಂತ್ರಘೋಷಗಳ ನಡುವೆ ಗುಲಾಬಿ ರುಮಾಲು ಧಾರಣೆ
ಸಮಾರಂಭದಲ್ಲಿ ವೇದ ಮಂತ್ರಗಳ ಪಠಣದ ನಡುವೆ ತೇಜಸ್ವಿ ಅವರಿಗೆ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಶೋಕಾಚರಣೆಯ ಅಂತ್ಯ ಮತ್ತು ಜವಾಬ್ದಾರಿಯ ಸ್ವೀಕಾರದ ಸಂಕೇತವಾಗಿ ಅವರಿಗೆ ಗುಲಾಬಿ ಬಣ್ಣದ ರುಮಾಲನ್ನು (ಪೇಟ) ತೊಡಿಸಲಾಯಿತು. ಸಂಪ್ರದಾಯದಂತೆ ಈ ರುಮಾಲನ್ನು ಜೋಧ್‌ಪುರ-ಮಾರ್ವಾರ್‌ನ ಹಿಂದಿನ ರಾಜಮನೆತನದಿಂದ ಕಳುಹಿಸಿಕೊಡಲಾಗಿತ್ತು. ಪದ್ಧತಿಯ ಪ್ರಕಾರ ಹಣೆಗೆ ತಿಲಕವನ್ನಿಟ್ಟು ಅಧಿಕೃತವಾಗಿ ಉತ್ತರಾಧಿಕಾರಿಯಾಗಿ ಒಪ್ಪಿಕೊಳ್ಳಲಾಯಿತು.
65 ವರ್ಷಗಳ ಬಳಿಕ ನಡೆದ ಸಮಾರಂಭ
ಜೋಧ್‌ಪುರ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿದ್ದ ಪಾಲಿಯ ಕೆಲವು ಭಾಗಗಳಲ್ಲಿ ‘ಪಾಗ್ ಕಾ ದಸ್ತೂರ್’ ಆಚರಣೆ ಚಾಲ್ತಿಯಲ್ಲಿದೆ. ಕುಟುಂಬದ ಮುಖ್ಯಸ್ಥನ ಮರಣದ ನಂತರ ನಾಯಕತ್ವ ಮತ್ತು ಜವಾಬ್ದಾರಿಯನ್ನು ಹಸ್ತಾಂತರಿಸುವ ಈ ಪದ್ಧತಿ ಐತಿಹಾಸಿಕವಾಗಿ ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ತೇಜಸ್ವಿ ಅವರ ತಂದೆಗೆ ಗಂಡುಮಕ್ಕಳಿಲ್ಲದ ಕಾರಣ, ಸಮುದಾಯದ ಹಿರಿಯರು ಒಟ್ಟಾಗಿ ಚರ್ಚಿಸಿ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಗಂಡು ಸಂತಾನವಿಲ್ಲದ ಕಾರಣದಿಂದಾಗಿ ಕಳೆದ 65 ವರ್ಷಗಳಿಂದ ಈ ಕುಟುಂಬದಲ್ಲಿ ಉತ್ತರಾಧಿಕಾರ ಸಮಾರಂಭ ನಡೆದಿರಲಿಲ್ಲ ಎಂಬುದು ವಿಶೇಷ.
ಓದಿನ ಜೊತೆಗೆ ಊರಿನ ಅಭಿವೃದ್ಧಿಯತ್ತ ಗಮನ
ಗ್ರಾಮಸ್ಥರು ಈ ನಿರ್ಧಾರವನ್ನು ಪ್ರಗತಿಪರ ಹೆಜ್ಜೆ ಎಂದು ಬಣ್ಣಿಸಿದ್ದು, ಬದಲಾಗುತ್ತಿರುವ ಸಾಮಾಜಿಕ ಧೋರಣೆಗಳಿಗೆ ಇದು ಕನ್ನಡಿಯಾಗಿದೆ ಎಂದಿದ್ದಾರೆ. ಸಮಾನತೆಯ ಆಧುನಿಕ ವಿಚಾರಗಳೊಂದಿಗೆ ಸಂಪ್ರದಾಯವನ್ನು ಉಳಿಸಿಕೊಳ್ಳಲು ಸಮುದಾಯ ಈ ನಿರ್ಧಾರ ತೆಗೆದುಕೊಂಡಿದೆ. ಪ್ರಸ್ತುತ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತೇಜಸ್ವಿ, ತಾವು ಮುಂದೆಯೂ ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ತಮ್ಮ ಮೇಲಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಾ, ಗ್ರಾಮದ ಅಭಿವೃದ್ಧಿಗಾಗಿ ತಂದೆ ಕಂಡಿದ್ದ ಕನಸುಗಳನ್ನು ನನಸು ಮಾಡಲು ಶ್ರಮಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : “ಇದು ನಂಬಲಾಗುತ್ತಿಲ್ಲ” : ಭಾರತದ ವಿರುದ್ಧ ಐರ್ಲೆಂಡ್‌ಗೆ ಐತಿಹಾಸಿಕ ಜಯ ತಂದುಕೊಟ್ಟ ಮ್ಯಾಥ್ಯೂ ಹೊಲ್ಲಾರ್ಡ್ ಸಂತಸ!


















