ನವದೆಹಲಿ : ಸೌಜನ್ಯ ಪ್ರಕರಣಕ್ಕೂ ಸಂತೋಷ್ ರಾವ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ ಪರಿಹಾರಕ್ಕೆ ಸಂಬಂಧಿಸಿದ ಅಂಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಸಂತೋಷ್ ರಾವ್ ಅವರು ತಮಗಾದ ನಷ್ಟಕ್ಕೆ ಪರಿಹಾರ ಕೋರಿ ಸೂಕ್ತ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ ಎಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಆಗಸ್ಟ್ 11ರಂದು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಸಂಜೀವ್ ಸಾಚ್‌ದೇವ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಈ ಆದೇಶ ನೀಡಿದೆ.
ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪರಿಹಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿದೆ. ಸಂತೋಷ್ ರಾವ್ ಅವರು ತಮಗಾದ ನಷ್ಟಕ್ಕೆ ಪರಿಹಾರ ಪಡೆಯಲು ಸೂಕ್ತ ನ್ಯಾಯಾಲಯದ ಮುಂದೆ ಸ್ವತಂತ್ರವಾಗಿ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಹೈಕೋರ್ಟ್ ನೀಡಿದ್ದ ಅವಕಾಶವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ.
ಈ ಹಿನ್ನೆಲೆ, ಕರ್ನಾಟಕ ಸರ್ಕಾರ ಸಲ್ಲಿಸಿದ್ದ SLP ಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅರ್ಜಿ ಸಲ್ಲಿಕೆಯಲ್ಲಿ ಉಂಟಾಗಿದ್ದ ವಿಳಂಬವನ್ನೂ ನ್ಯಾಯಾಲಯ ಕ್ಷಮಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಹರೀಶ್ ಕುಮಾರ್ ಅವರ ಪೀಠ ನೀಡಿದ್ದ ಆದೇಶದ ಪರಿಹಾರಕ್ಕೆ ಸಂಬಂಧಿಸಿದ ಅಂಶವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇದರಿಂದ ಸಂತೋಷ್ ರಾವ್ ಅವರಿಗೆ ತಮಗಾದ ನಷ್ಟಕ್ಕೆ ಪರಿಹಾರ ಕೋರಿ ಸೂಕ್ತ ನ್ಯಾಯಾಲಯದ ಮುಂದೆ ಪ್ರತ್ಯೇಕವಾಗಿ ಕಾನೂನು ಕ್ರಮ ಕೈಗೊಳ್ಳಲು ಮತ್ತಷ್ಟು ಅವಕಾಶ ದೊರೆತಂತಾಗಿದೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ CCB ರೇಡ್.. ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ!



















