ವಾಷಿಂಗ್ಟನ್ : ಅಮೆರಿಕದ ಶ್ವೇತಭವನದಲ್ಲಿ ಶನಿವಾರ ರಾತ್ರಿ ಪತ್ರಕರ್ತರ ವಾರ್ಷಿಕ ಔತಣಕೂಟದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿ ನಡೆದ ಗುಂಡಿನ ದಾಳಿಯ ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈ ಆಘಾತಕಾರಿ ಘಟನೆಯ ಬೆನ್ನಲ್ಲೇ, ಕಾರ್ಯಕ್ರಮ ಆರಂಭಕ್ಕೂ ಮುನ್ನ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ನೀಡಿದ್ದ ಹೇಳಿಕೆಯೊಂದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “ಇಂದು ರಾತ್ರಿ ಗುಂಡುಗಳು ಹಾರಲಿವೆ” ಎಂದು ಅವರು ಸಾಂಕೇತಿಕವಾಗಿ ಹೇಳಿದ್ದ ಮಾತು, ದುರದೃಷ್ಟವಶಾತ್ ನಿಜವಾಗಿ ಪರಿಣಮಿಸಿದೆ.
ಸಾಂಕೇತಿಕವಾಗಿ ಹೇಳಿದ್ದ ಮಾತು ಸತ್ಯವಾದಾಗ!
ಘಟನೆಗೂ ಮುನ್ನ ಫಾಕ್ಸ್ ನ್ಯೂಸ್ ಪತ್ರಕರ್ತರೊಂದಿಗೆ ಮಾತನಾಡಿದ್ದ ಕ್ಯಾರೋಲಿನ್ ಲೀವಿಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣದ ಬಗ್ಗೆ ವಿವರಿಸುತ್ತಾ ಈ ಹೇಳಿಕೆ ನೀಡಿದ್ದರು. “ಅವರು ಅಬ್ಬರಿಸಲು ಸಿದ್ಧರಾಗಿದ್ದಾರೆ. ಇಂದಿನ ಭಾಷಣವು ಕ್ಲಾಸಿಕ್ ಡೊನಾಲ್ಡ್ ಟ್ರಂಪ್ ಶೈಲಿಯಲ್ಲಿರಲಿದೆ. ಇದು ತಮಾಷೆಯಿಂದ ಹಾಗೂ ಮನರಂಜನೆಯಿಂದ ಕೂಡಿರುತ್ತದೆ.
ಸಭಾಂಗಣದಲ್ಲಿ ಇಂದು ರಾತ್ರಿ ಕೆಲವು ಗುಂಡುಗಳು ಹಾರಲಿವೆ. ಹೀಗಾಗಿ ಪ್ರತಿಯೊಬ್ಬರೂ ಇದನ್ನು ವೀಕ್ಷಿಸಬೇಕು,” ಎಂದು ಹೇಳಿದ್ದರು. ಟ್ರಂಪ್ ಅವರ ಭಾಷಣದ ಪ್ರಖರತೆ ಮತ್ತು ವಿರೋಧಿಗಳ ಮೇಲಿನ ವಾಗ್ದಾಳಿಯನ್ನು ಉಲ್ಲೇಖಿಸಿ ಅವರು ಈ ರೀತಿ ಹೇಳಿದ್ದರು. ಈ ಭಾಷಣವನ್ನು ಯಾರು ಬರೆದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ಟ್ರಂಪ್ ಅವರೇ ಸ್ವತಃ ಪೆನ್ನು ಹಿಡಿದು ತಮ್ಮ ಭಾಷಣವನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದ್ದರು. ಆದರೆ, ಲೀವಿಡ್ ಅವರ ಈ ‘ಗುಂಡು ಹಾರುವ’ ಹೇಳಿಕೆ ಕಾರ್ಯಕ್ರಮದಲ್ಲಿ ನಿಜಕ್ಕೂ ಗುಂಡಿನ ದಾಳಿಗೆ ಸಾಕ್ಷಿಯಾಗಿದ್ದು ವಿಪರ್ಯಾಸ.
ದಿಢೀರ್ ಗುಂಡಿನ ಸದ್ದು, ಮೆಲಾನಿಯಾಗೆ ಅರಿವಾಗಿದ್ದೇನು?
ಅಧ್ಯಕ್ಷರಾಗಿ ಮೊದಲ ಬಾರಿಗೆ ಶ್ವೇತಭವನದ ಪತ್ರಕರ್ತರ ಸಂಘದ ವಾರ್ಷಿಕ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಟ್ರಂಪ್ ವೇದಿಕೆಯ ಮೇಲೆ ಆಸೀನರಾಗಿದ್ದರು. ಈ ವೇಳೆ ಏಕಾಏಕಿ ಭಾರಿ ಸದ್ದು ಕೇಳಿಬಂದಿದೆ. ಆರಂಭದಲ್ಲಿ ಗುಂಡಿನ ಸದ್ದು ಬಹಳ ದೂರದಿಂದ ಬಂದಂತೆ ಭಾಸವಾದ ಕಾರಣ, ಯಾವುದೋ ಟ್ರೇ ಬಿದ್ದ ಸದ್ದು ಎಂದು ಟ್ರಂಪ್ ಭಾವಿಸಿದ್ದರು. ಆದರೆ, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ತಕ್ಷಣವೇ ಎಚ್ಚೆತ್ತುಕೊಂಡು, “ಇದೇನೋ ಕೆಟ್ಟ ಸದ್ದು” ಎಂದು ಎಚ್ಚರಿಸಿದ್ದರು ಎಂದು ಸ್ವತಃ ಟ್ರಂಪ್ ನೆನಪಿಸಿಕೊಂಡಿದ್ದಾರೆ. ಅಷ್ಟರಲ್ಲಾಗಲೇ ಕಾರ್ಯಪ್ರವೃತ್ತರಾದ ಅಮೆರಿಕದ ‘ಸೀಕ್ರೆಟ್ ಸರ್ವೀಸ್’ ಸಿಬ್ಬಂದಿ, ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಟ್ರಂಪ್ ಅವರನ್ನು ಸುತ್ತುವರಿದರು ಮತ್ತು ವೇದಿಕೆಯ ಹಿಂಭಾಗದ ಪರದೆಯ ಮೂಲಕ ಅವರನ್ನು ದಿಢೀರನೆ ಸುರಕ್ಷಿತವಾಗಿ ಹೊರಗೆ ಕರೆದೊಯ್ದರು. ಈ ವೇಳೆ ಸಭಾಂಗಣದಲ್ಲಿದ್ದವರು ಆತಂಕದಿಂದ ಟೇಬಲ್‌ಗಳ ಕೆಳಗೆ ಕುಸಿದು ಕುಳಿತಿದ್ದರು.
‘ಒಂಟಿ ತೋಳ’ ದಾಳಿ
ತಮ್ಮನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೊಂದು ‘ಒಂಟಿ ತೋಳ’ (Lone Wolf – ಏಕಾಂಗಿಯಾಗಿ ದಾಳಿ ಮಾಡುವ ವ್ಯಕ್ತಿ) ಮಾದರಿಯ ದಾಳಿ ಎಂದು ಬಣ್ಣಿಸಿದ್ದಾರೆ. ಭದ್ರತಾ ಬ್ಯಾರಿಕೇಡ್ ದಾಟಿ ಓಡಿಬರುತ್ತಿದ್ದ ಶಂಕಿತನತ್ತ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಧಾವಿಸುತ್ತಿರುವ ವಿಡಿಯೋವೊಂದನ್ನು ಟ್ರಂಪ್ ಹಂಚಿಕೊಂಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಭದ್ರತಾ ಅಧಿಕಾರಿಯೊಬ್ಬರಿಗೆ ಗುಂಡು ತಗುಲಿದೆಯಾದರೂ, ಅವರು ಬುಲೆಟ್-ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಘಟನೆಯನ್ನು ಅವಲೋಕಿಸಿದಾಗ ಈ ಕಟ್ಟಡವು ಭದ್ರತೆಯ ದೃಷ್ಟಿಯಿಂದ ಅಷ್ಟೊಂದು ಸುರಕ್ಷಿತವಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ದೇಶದಲ್ಲಿ ರಣಬಿಸಿಲು – 10 ರಾಜ್ಯಗಳಲ್ಲಿ ಹೈ ಅಲರ್ಟ್, ಬಾಂಡಾದಲ್ಲಿ ದಾಖಲೆಯ 47.4 ಡಿಗ್ರಿ ತಾಪಮಾನ



















