ಚಂಡೀಗಢ: ರಜೆಯಲ್ಲಿ ಮನೆಗೆ ಬಂದಿದ್ದ ಗಡಿ ಭದ್ರತಾ ಪಡೆ (BSF) ಯೋಧನೊಬ್ಬ ತನ್ನ ಪತ್ನಿಯ ಮೇಲೆ ತೀವ್ರ ಹಲ್ಲೆ ನಡೆಸಿ ಆಕೆಯನ್ನು ಕೊಲೆಗೈದು, ಬಳಿಕ ಆಕೆ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ ಘಟನೆ ಪಂಜಾಬ್‌ನ ಹೊಶಿಯಾರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಬಿಎಸ್ಎಫ್ ಯೋಧ ಅಮರ್‌ಜಿತ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ರಮಾ ಎಂದು ಗುರುತಿಸಲಾಗಿದೆ. ಈ ದಂಪತಿಗೆ ಮದುವೆಯಾಗಿ 12 ವರ್ಷಗಳಾಗಿದ್ದು, ಒಬ್ಬ ಮಗ ಹಾಗೂ ಮಗಳಿದ್ದಾರೆ. ಪೊಲೀಸರಿಗೆ ಸಲ್ಲಿಕೆಯಾಗಿರುವ ದೂರಿನ ಪ್ರಕಾರ, ರಜೆಯಲ್ಲಿದ್ದ ಅಮರ್‌ಜಿತ್ ಸಿಂಗ್ ಆಗಸ್ಟ್ 13ರ ರಾತ್ರಿ ಮನೆಗೆ ಹಿಂತಿರುಗಿದ್ದರು. ಈ ವೇಳೆ ದಂಪತಿಯ ನಡುವೆ ಭಾರೀ ಗಲಾಟೆ ನಡೆದಿದ್ದು, ಆತ ರಮಾ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ಆಕೆ ಮನೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.
ಆಸ್ಪತ್ರೆಗೆ ಬಂದಾಗ ಬಯಲಾಯ್ತು ಸುಳ್ಳು
ಆಗಸ್ಟ್ 14ರ ಬೆಳಗಿನ ಜಾವ 4 ಗಂಟೆಗೆ ರಮಾ ಅವರ ಪೋಷಕರಿಗೆ ಕರೆ ಮಾಡಿದ ಅಮರ್‌ಜಿತ್, ಆಕೆ ಮಹಡಿಯಿಂದ ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿಸಿದ್ದ. ಆದರೆ, ಆತಂಕದಿಂದ ಆಸ್ಪತ್ರೆಗೆ ಧಾವಿಸಿದ ಪೋಷಕರಿಗೆ ರಮಾ ಆಗಲೇ ಮೃತಪಟ್ಟಿರುವುದು ತಿಳಿದುಬಂದಿದೆ. ಆಕೆಯ ದೇಹದ ಮೇಲಿದ್ದ ತೀವ್ರ ಗಾಯದ ಗುರುತುಗಳನ್ನು ಕಂಡು ಸಂಶಯಗೊಂಡ ಕುಟುಂಬಸ್ಥರು, ಹಲ್ಲೆ ನಡೆಸಿ ಕೊಲೆ ಮಾಡಿ, ಪ್ರಕರಣವನ್ನು ಮರೆಮಾಚಲು ಮಹಡಿಯಿಂದ ಬಿದ್ದಿದ್ದಾಳೆ ಎಂದು ಸುಳ್ಳು ಕಥೆ ಕಟ್ಟಿರುವುದಾಗಿ ಆರೋಪಿಸಿದ್ದಾರೆ.
ಪತಿ ಬಂಧನ, ಇಬ್ಬರು ನಾಪತ್ತೆ
ಮದುವೆಯಾದಾಗಿನಿಂದಲೂ ಅಮರ್‌ಜಿತ್ ತನ್ನ ಮಗಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಮೃತ ರಮಾ ಅವರ ತಂದೆ ರಾಮ್ ಚಂದ್ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಮರ್‌ಜಿತ್ ಸಿಂಗ್, ಆತನ ಚಿಕ್ಕಪ್ಪ ಕುಲದೀಪ್ ಕುಕಿ ಮತ್ತು ಚಿಕ್ಕಮ್ಮ ಸೋನಿಯಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಮರ್‌ಜಿತ್‌ನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಮೂಲ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಠಾಣಾಧಿಕಾರಿ ಹರ್‌ಪ್ರೇಮ್ ಸಿಂಗ್ ತಿಳಿಸಿದ್ದಾರೆ.


















