ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಇಂದು (ಭಾನುವಾರ) ಬೆಳಗ್ಗೆ ಆಘಾತಕಾರಿ ಘಟನೆಯೊಂದು ನಡೆದಿದೆ. ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರೊಬ್ಬರ ಪಿಸ್ತೂಲ್ ಶಸ್ತ್ರಾಸ್ತ್ರ ತಪಾಸಣೆ (Weapons Check) ವೇಳೆ ಆಕಸ್ಮಿಕವಾಗಿ ಸಿಡಿದ ಪರಿಣಾಮ ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಸ್ತ್ರಾಸ್ತ್ರ ತಪಾಸಣೆ ವೇಳೆ ಅನಾಹುತ
ಉತ್ತರ ಪ್ರದೇಶದ ಅಜಂಘಡ ಮೂಲದ ಪ್ರಯಾಣಿಕ ತಮ್ಮ ಪತ್ನಿಯೊಂದಿಗೆ ಏರ್ ಇಂಡಿಯಾ (IX-1810) ವಿಮಾನದಲ್ಲಿ ಮುಂಬೈಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ತಾವು ಪಿಸ್ತೂಲ್ ಹಾಗೂ ಮ್ಯಾಗಜೀನ್ ಒಯ್ಯುತ್ತಿರುವುದಾಗಿ ಅವರು ವಿಮಾನ ಏರುವ ಮುನ್ನವೇ ಮುಂಚಿತವಾಗಿಯೇ ಘೋಷಿಸಿಕೊಂಡಿದ್ದರು.
ಬೆಳಗ್ಗೆ ಸುಮಾರು 9.30ರ ಸುಮಾರಿಗೆ ಪ್ರಯಾಣಿಕ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿಯ ಸಮ್ಮುಖದಲ್ಲಿ ಈ ಶಸ್ತ್ರಾಸ್ತ್ರ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಯುತ್ತಿತ್ತು. ಈ ಪ್ರಕ್ರಿಯೆಯ ವೇಳೆ ಇದ್ದಕ್ಕಿದ್ದಂತೆ ಪ್ರಯಾಣಿಕನ ಬಳಿಯಿದ್ದ ಪಿಸ್ತೂಲ್‌ನಿಂದ ಗುಂಡು ಸಿಡಿದಿದೆ.
ನೆಲಕ್ಕೆ ಬಡಿದು ಸಿಬ್ಬಂದಿ ದೇಹ ಹೊಕ್ಕ ಗುಂಡು
ಬಂದೂಕಿನಿಂದ ಹೊರಬಂದ ಗುಂಡು ಮೊದಲು ನೆಲಕ್ಕೆ ಬಡಿದು, ನಂತರ ಪಕ್ಕದಲ್ಲೇ ನಿಂತಿದ್ದ ‘ಎಎಐಸಿಎಲ್‌ಎಎಸ್’ (AAICLAS) ಸಂಸ್ಥೆಯ ಇಬ್ಬರು ಸ್ಕ್ರೀನರ್‌ಗಳಿಗೆ ತಾಗಿದೆ. ಈ ಪೈಕಿ ಮಹಿಳಾ ಸಿಬ್ಬಂದಿಯ ತೊಡೆಗೆ ಗುಂಡೇಟು ಬಿದ್ದಿದ್ದರೆ, ಮತ್ತೊಬ್ಬ ಪುರುಷ ಸಿಬ್ಬಂದಿಯ ಕೈಗೆ ಗಾಯವಾಗಿದೆ.
ಆಸ್ಪತ್ರೆಗೆ ದಾಖಲು, ತನಿಖೆ ಪ್ರಗತಿಯಲ್ಲಿ
ಘಟನೆ ನಡೆದ ತಕ್ಷಣವೇ ಗಾಯಾಳು ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಖಾಸಗಿ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ಇಬ್ಬರೂ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಸ್ತುತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವಾರಾಣಸಿ ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ತಿಳಿಸಿದ್ದಾರೆ.
ಘಟನೆ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ನಿಯಮಾವಳಿಗಳ ಉಲ್ಲಂಘನೆ ಹಾಗೂ ಆಕಸ್ಮಿಕ ಗುಂಡು ಹಾರಾಟದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಶಸ್ತ್ರಾಸ್ತ್ರ ತಪಾಸಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿಯಿಂದಲೂ ಮಾಹಿತಿ ಪಡೆಯುವ ಸಾಧ್ಯತೆಯಿದೆ. ತನಿಖೆಯ ಬಳಿಕ ಘಟನೆಯ ನಿಖರ ಕಾರಣ ಮತ್ತು ಮುಂದಿನ ಕಾನೂನು ಕ್ರಮದ ಕುರಿತು ಸ್ಪಷ್ಟತೆ ದೊರೆಯಲಿದೆ.



















