ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಹಾಗೂ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವು ಭಾಗಗಳಲ್ಲಿ ಅವಾಂತರಗಳು ಸೃಷ್ಟಿಯಾಗಿದೆ. ಭಾರಿ ಮಳೆಯ ಪರಿಣಾಮ ಹಲವೆಡೆ ಮರಗಳು ಧರೆಗುರುಳಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಯಶವಂತಪುರದ ಮುಖ್ಯರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮರ ಬಿದ್ದಿದ್ದರಿಂದ ರಸ್ತೆಯಲ್ಲಿ ವಾಹನಗಳು ಸಾಗಲು ಸಾಧ್ಯವಾಗದೆ ಸಂಚಾರಕ್ಕೆ ಭಾರಿ ತೊಂದರೆ ಉಂಟಾಗಿದೆ.
ಇದೇ ವೇಳೆ ಮಲ್ಲೇಶ್ವರಂ 8ನೇ ಮುಖ್ಯರಸ್ತೆ ಹಾಗೂ ಕೆನರಾ ಯೂನಿಯನ್ ರಸ್ತೆಯಲ್ಲೂ ಮರಗಳು ಬಿದ್ದಿರುವ ಘಟನೆ ನಡೆದಿದೆ. ಮಳೆಯಿಂದ ಮರಗಳು ಧರೆಗುರುಳಿದ ಪರಿಣಾಮ ಈ ಭಾಗಗಳಲ್ಲೂ ವಾಹನ ಸವಾರರಿಗೆ ಸಮಸ್ಯೆಯಾಗಿದೆ.
ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಜಿಬಿಎ ಸಿಬ್ಬಂದಿ ಕೈಗೊಂಡಿದ್ದಾರೆ. ಮರ ತೆರವು ಕಾರ್ಯಕ್ಕೆ ಟ್ರಾಫಿಕ್ ಪೊಲೀಸರು ಕೂಡ ಸಹಕಾರ ನೀಡುತ್ತಿದ್ದು, ರಸ್ತೆ ಸಂಚಾರವನ್ನು ಸಹಜ ಸ್ಥಿತಿಗೆ ತರಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಇನ್ನು ದೊಮ್ಮಲೂರಿನಲ್ಲಿ ಆರ್ಮಿ ಕಾಂಪೌಂಡ್ ಗೋಡೆ ಕುಸಿದು ನಾಲ್ಕು ಹಸುಗಳು ಹಾಗೂ ಒಂದು ಕರು ಮೃತಪಟ್ಟಿವೆ. ಜಾನುವಾರುಗಳ ಮಾಲೀಕ ಮುನಿರಾಜು ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಮಾನವಕುಲಕ್ಕೇ AI ಕಂಟಕ ಎಂದು ಗೂಗಲ್ ಡೀಪ್‌ಮೈಂಡ್ ಸಂಶೋಧಕ ರಾಜೀನಾಮೆ


















