ಮುಂಬೈ: ವಾಣಿಜ್ಯ ನಗರಿ ಮುಂಬೈ ಮಹಾನಗರದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಶನಿವಾರ ಮತ್ತು ಭಾನುವಾರ ಭಾರತೀಯ ಹವಾಮಾನ ಇಲಾಖೆ (IMD) ನಗರಕ್ಕೆ ‘ರೆಡ್ ಅಲರ್ಟ್‘ ಘೋಷಿಸಿದೆ. ಮುಂಬೈ ಹಾಗೂ ಅದರ ಉಪನಗರಗಳಲ್ಲಿ ಭಾರೀ ಮಳೆಯಾಗಲಿದ್ದು, ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಂತ ಭೀಕರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇದರೊಂದಿಗೆ ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯೂ ಇರುವುದರಿಂದ ಸಾರ್ವಜನಿಕರು ಜಾಗರೂಕರಾಗಿರಲು ಎಚ್ಚರಿಕೆ ನೀಡಲಾಗಿದೆ.
ಇಂದು ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಮುಂಬೈನ ಹಲವು ಭಾಗಗಳಲ್ಲಿ ಈಗಾಗಲೇ 100 ಮಿಲಿಮೀಟರ್‌ಗಿಂತಲೂ ಅಧಿಕ ಮಳೆ ದಾಖಲಾಗಿದೆ. ಸಾರ್ವಜನಿಕ ಸಾರಿಗೆ ಸೇವೆಗಳು ಸದ್ಯಕ್ಕೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರೂ, ಮುಂಬೈನ ಜೀವನಾಡಿಯಾಗಿರುವ ಉಪನಗರ ಸ್ಥಳೀಯ ರೈಲುಗಳ ಸಂಚಾರದಲ್ಲಿ ಭಾರಿ ವಿಳಂಬವಾಗುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ನಗರದ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿರುವುದು ಕಂಡುಬಂದಿದೆ. ಮುಂಬೈ ಮಾತ್ರವಲ್ಲದೆ ನೆರೆಯ ಪುಣೆ ಮತ್ತು ಠಾಣೆ ಜಿಲ್ಲೆಗಳಲ್ಲೂ ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಹಳ್ಳಗಳಂತಾಗಿದ್ದು, ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಹಂಚಿಕೊಂಡಿರುವ ಅಂಕಿ-ಅಂಶಗಳ ಪ್ರಕಾರ, ಪಶ್ಚಿಮ ಉಪನಗರದ ಬಾಂದ್ರಾದಲ್ಲಿ ಗರಿಷ್ಠ 150.6 ಮಿಲಿಮೀಟರ್ ಮಳೆಯಾಗಿದೆ. ದ್ವೀಪ ನಗರಿ ಭಾಗದ ಪರೇಲ್‌ನಲ್ಲಿ 141.8 ಮಿಮೀ, ಮಾಟುಂಗಾ-ದಾದರ್‌ನಲ್ಲಿ 135.2 ಮಿಮೀ ಮತ್ತು ಫೋರ್ಟ್ ಪ್ರದೇಶದಲ್ಲಿ 120.8 ಮಿಮೀ ಮಳೆ ದಾಖಲಾಗಿದೆ. ಇನ್ನು ಪೂರ್ವ ಉಪನಗರದ ವಿಖ್ರೋಲಿಯಲ್ಲಿ 143 ಮಿಮೀ ಮತ್ತು ಘಾಟ್‌ಕೋಪರ್‌ನಲ್ಲಿ 136.4 ಮಿಮೀ ಮಳೆಯಾಗಿದೆ. ಮುಂಬೈ ಕರಾವಳಿಯಲ್ಲಿ ಇಂದು ಮಧ್ಯಾಹ್ನ 2.50 ಕ್ಕೆ ಸುಮಾರು 4.26 ಮೀಟರ್ ಎತ್ತರದ ಭಾರಿ ಉಬ್ಬರವಿಳಿತ ಸಂಭವಿಸುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಸಮುದ್ರ ತೀರಕ್ಕೆ ಹೋಗದಂತೆ ಸೂಚಿಸಲಾಗಿದೆ.
ಐವರ ಬಲಿ ಪಡೆದ ವರುಣ
ಮಹಾರಾಷ್ಟ್ರದಾದ್ಯಂತ ಮಳೆ ಸಂಬಂಧಿತ ಅವಘಡಗಳಿಗೆ ಇದುವರೆಗೆ ಐದು ಜನರು ಬಲಿಯಾಗಿದ್ದಾರೆ. ಈ ಪೈಕಿ ಮುಂಬೈನಲ್ಲಿ ಮೂವರು, ಪುಣೆ ಮತ್ತು ಠಾಣೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಜೂನ್ 30ರಂದು ಮುಂಬೈನಲ್ಲಿ ಸ್ಕೂಲ್ ಬಸ್ ಮೇಲೆ ಮರ ಬಿದ್ದು 11 ವರ್ಷದ ಬಾಲಕ ಮೃತಪಟ್ಟಿದ್ದ. ಮತ್ತೊಂದು ದುರಂತದಲ್ಲಿ, ಸಾಕಿನಾಕಾದಲ್ಲಿ ಗುತ್ತಿಗೆದಾರರು ಒಳಚರಂಡಿ ಸ್ವಚ್ಛಗೊಳಿಸಲು ಮ್ಯಾನ್‌ಹೋಲ್ ಮುಚ್ಚಳವನ್ನು ತೆಗೆದು ಯಾವುದೇ ಮುನ್ನೆಚ್ಚರಿಕೆ ಫಲಕ ಹಾಕದ ಕಾರಣ, 55 ವರ್ಷದ ವ್ಯಕ್ತಿಯೊಬ್ಬರು ತೆರೆದ ಮ್ಯಾನ್‌ಹೋಲ್ ಒಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಮೀರಾ-ಭಯಂದರ್‌ನಲ್ಲಿ ಮರ ಬಿದ್ದು ಮತ್ತೊಬ್ಬರು ಸಾವನ್ನಪ್ಪಿದ್ದಾರೆ.
ಪುಣೆಯ ಲೋನಿ ಕಲ್ಭೋರ್ ಪ್ರದೇಶದಲ್ಲಿ ಚರಂಡಿ ಕಾಮಗಾರಿಗಾಗಿ ಅಗೆದು ಹಾಗೇ ಬಿಡಲಾಗಿದ್ದ ಗುಂಡಿಗೆ ಬಿದ್ದು 2 ವರ್ಷದ ಮಗು ಮೃತಪಟ್ಟಿದೆ. ಇನ್ನು ಜುಲೈ 1 ರಂದು ಠಾಣೆಯಲ್ಲಿ ಮಳೆಯ ನಡುವೆ ರಸ್ತೆಯಲ್ಲಿ ಸಾಗುತ್ತಿದ್ದ 35 ವರ್ಷದ ಮಹಿಳೆಯೊಬ್ಬರು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಳಿ ಕಾಲು ಜಾರಿ ಬಿದ್ದಾಗ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನವಿ ಮುಂಬೈನಲ್ಲಿ ತಂತಿ ತುಂಡಾಗಿ ಬಿದ್ದಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ವಿದ್ಯುತ್ ಆಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರು ವಿದ್ಯುತ್ ಕಂಬಗಳು ಮತ್ತು ತೆರೆದ ಚರಂಡಿಗಳಿಂದ ದೂರವಿರಬೇಕೆಂದು ಸೂಚನೆ ನೀಡಲಾಗಿದೆ.



















