ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಧಿಕೃತ ಅಂತ್ಯಕ್ರಿಯೆಯ ವಿಧಿವಿಧಾನಗಳು ಶನಿವಾರ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಆರಂಭವಾಗಿದ್ದು, ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ 86 ವರ್ಷದ ಖಮೇನಿ ಅವರೊಂದಿಗೆ ಅವರ ಕುಟುಂಬದ ಕೆಲ ಸದಸ್ಯರು ಸಹ ಮೃತಪಟ್ಟಿದ್ದರು. ಈ ಪೈಕಿ ಖಮೇನಿ ಅವರ 14 ತಿಂಗಳ ಪುಟ್ಟ ಮೊಮ್ಮಗಳು ಜಹ್ರಾ ಮೊಹಮ್ಮದಿ ಗೋಲ್ಪಾಯೆಗಾನಿ ಕೂಡ ಒಬ್ಬಳು. ಅಂತ್ಯಕ್ರಿಯೆಯ ಸಂದರ್ಭದಲ್ಲಿ ಆಕೆಯ ಪುಟ್ಟ ಶವಪೆಟ್ಟಿಗೆಯನ್ನು ರಾಷ್ಟ್ರಧ್ವಜದಿಂದ ಹೊದಿಸಿ, ಪಕ್ಕದಲ್ಲೇ ಆಕೆಯ ಭಾವಚಿತ್ರವನ್ನು ಇರಿಸಲಾಗಿದ್ದು, ಇದು ನೆರೆದವರನ್ನು ಭಾವುಕರನ್ನಾಗಿಸಿದೆ.
ಟೆಹ್ರಾನ್‌ನಲ್ಲಿ ಹರಿದುಬಂದ ಜನಸಾಗರ, ಆಕ್ರೋಶದ ಘೋಷಣೆ
ಇರಾನ್‌ನ ಇಸ್ಲಾಮಿಕ್ ಗಣರಾಜ್ಯದ ಧ್ವಜವನ್ನು ಹೊದಿಸಿ, ಮೇಲ್ಭಾಗದಲ್ಲಿ ಅವರ ಸಾಂಪ್ರದಾಯಿಕ ಕಪ್ಪು ಮುಂಡಾಸನ್ನು (ಟರ್ಬನ್) ಇರಿಸಲಾಗಿದ್ದ ಖಮೇನಿ ಅವರ ಶವಪೆಟ್ಟಿಗೆಯನ್ನು ಟೆಹ್ರಾನ್‌ನ ಭವ್ಯ ಮೊಸಲ್ಲಾ ಸಂಕೀರ್ಣಕ್ಕೆ ತರಲಾಗಿದೆ. ಅವರ ಪಕ್ಕದಲ್ಲೇ ಅವರ ಕುಟುಂಬಸ್ಥರ ಮೃತದೇಹಗಳನ್ನು ಇರಿಸಲಾಗಿದೆ. ಇರಾನ್ ಮತ್ತು ನೆರೆಯ ಇರಾಕ್‌ನ ಪ್ರಮುಖ ನಗರಗಳಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಒಟ್ಟು ಆರು ದಿನಗಳ ಭವ್ಯ ಶೋಕಯಾತ್ರೆಯನ್ನು ಯೋಜಿಸಲಾಗಿದ್ದು, ಶುಕ್ರವಾರ ಸಂಜೆಯಿಂದಲೇ ಲಕ್ಷಾಂತರ ಬೆಂಬಲಿಗರು ಮೈದಾನದ ಹೊರಗೆ ಕಾಯುತ್ತಿದ್ದಾರೆ. ಶನಿವಾರ ಮುಂಜಾನೆ ದ್ವಾರಗಳು ತೆರೆಯುತ್ತಿದ್ದಂತೆ ಇಡೀ ಆವರಣ ಜನರಿಂದ ತುಂಬಿಹೋಗಿದೆ. ಮುಂದಿನ ಮೂರು ದಿನಗಳಲ್ಲಿ ಟೆಹ್ರಾನ್ ಒಂದರಲ್ಲೇ 1.5 ರಿಂದ 2 ಕೋಟಿ ಜನ ಭಾಗವಹಿಸುವ ನಿರೀಕ್ಷೆಯಿದೆ. ಶೋಕತಪ್ತರಾಗಿದ್ದ ಜನಸಾಗರವು ಪ್ರತೀಕಾರದ ಸಂಕೇತವಾದ ಕೆಂಪು ಬ್ಯಾನರ್‌ಗಳನ್ನು ಹಿಡಿದು, “ಅಮೆರಿಕಕ್ಕೆ ಧಿಕ್ಕಾರ” ಹಾಗೂ “ಪ್ರತೀಕಾರ, ಪ್ರತೀಕಾರ” ಎಂದು ಆಕ್ರೋಶದ ಘೋಷಣೆಗಳನ್ನು ಕೂಗಿದ್ದಾರೆ.
ಕಣ್ಣೀರಿಟ್ಟ ನಾಯಕರು: ಭಾರತದ ಪ್ರತಿನಿಧಿಗಳೂ ಭಾಗಿ
ಅಂತ್ಯಕ್ರಿಯೆಯ ಪೂರ್ವಭಾವಿ ವಿಧಿವಿಧಾನಗಳ ಸಂದರ್ಭದಲ್ಲಿ ಇರಾನ್‌ನ ಉನ್ನತ ನಾಯಕರು ಕಣ್ಣೀರಿಟ್ಟಿದ್ದು, ಅಮೆರಿಕ ಜೊತೆಗಿನ ಮಾತುಕತೆಯ ಉನ್ನತ ಸಂಧಾನಕಾರ ಹಾಗೂ ಪಾರ್ಲಿಮೆಂಟ್ ಸ್ಪೀಕರ್ ಮೊಹಮ್ಮದ್ ಬಾಗರ್ ಘಾಲಿಬಾಫ್ ತೀವ್ರ ಭಾವುಕರಾಗಿ ಅಳುತ್ತಿರುವುದು ಕಂಡುಬಂತು. ಇದೇ ದಾಳಿಯಲ್ಲಿ ಕ್ರಾಂತಿಕಾರಿ ಪಡೆಗಳ (IRGC) ಮುಖ್ಯಸ್ಥರು ಸಹ ಮೃತಪಟ್ಟಿದ್ದರಿಂದ, ಅವರ ಸ್ಥಾನಕ್ಕೆ ಹೊಸದಾಗಿ ನೇಮಕಗೊಂಡಿರುವ ಅಹ್ಮದ್ ವಹೀದಿ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿರುವ ಈ ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಭಾರತದ ಪರವಾಗಿ ಬಿಹಾರದ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಮತ್ತು ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾದ ಪಬಿತ್ರಾ ಮಾರ್ಗರಿಟಾ ಅವರು ಭಾಗವಹಿಸಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
6 ದಿನಗಳ ಸುದೀರ್ಘ ಶೋಕಯಾತ್ರೆ
ಖಮೇನಿ ಅವರ ಮೃತದೇಹವನ್ನು ಸೋಮವಾರದವರೆಗೆ ಟೆಹ್ರಾನ್‌ನಲ್ಲೇ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ಅಲ್ಲಿ ಬೃಹತ್ ಮೆರವಣಿಗೆಗೂ ನಡೆಯಲಿದೆ. ತದನಂತರ ಮಂಗಳವಾರ ಇಸ್ಲಾಮಿಕ್ ಧಾರ್ಮಿಕ ಕೇಂದ್ರವಾದ ‘ಕೋಮ್’ (Qom) ನಗರಕ್ಕೆ ಕೊಂಡೊಯ್ಯಲಾಗುತ್ತದೆ. ಬುಧವಾರ ನೆರೆಯ ಇರಾಕ್ ದೇಶದ ಪವಿತ್ರ ನಗರಗಳ ಮೂಲಕ ಶೋಕಯಾತ್ರೆ ಸಾಗಲಿದ್ದು, ಅಂತಿಮವಾಗಿ ಗುರುವಾರ ಈಶಾನ್ಯ ಇರಾನ್‌ನಲ್ಲಿರುವ ಖಮೇನಿ ಅವರ ಸ್ವಂತ ನಗರವಾದ ‘ಮಶ್ಹಾದ್’ನಲ್ಲಿ (Mashhad) ಅಂತ್ಯಕ್ರಿಯೆ ಹಾಗೂ ದಫನ ಪ್ರಕ್ರಿಯೆ ನೆರವೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಗೋವಾದ ರೆಸಾರ್ಟ್‌ನಲ್ಲಿ ಮಲ್ಪೆ ಉದ್ಯಮಿ ಸಾವು.. ಕೊಲೆ ಶಂಕೆ, ಮಹಿಳೆಯ ಬಂಧನ



















