ನವದೆಹಲಿ : ಉದ್ಯಮಿ ಎಲಾನ್ ಮಸ್ಕ್ ಮಾಲಿಕತ್ವದ ‘ಎಕ್ಸ್’ (ಟ್ವಿಟರ್) ಸಾಮಾಜಿಕ ಜಾಲತಾಣವು ಸರ್ಕಾರಗಳ ಕೋರಿಕೆಯ ಮೇರೆಗೆ ಕಂಟೆಂಟ್ ತೆಗೆದುಹಾಕುವ ನಿಯಮಗಳನ್ನು ಹೆಚ್ಚು ಪಾರದರ್ಶಕಗೊಳಿಸಲು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರವು, ‘ಎಕ್ಸ್’ ಸಂಸ್ಥೆಯು ದೇಶದ ನಿಯಮಗಳು ಮತ್ತು ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದು ಸ್ಪಷ್ಟ ಸಂದೇಶ ರವಾನಿಸಿದೆ.
ಶನಿವಾರ ‘ಎಕ್ಸ್’ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಆಲ್ಗರಿದಮ್ ಘೋಷಿಸಿದ್ದ ಮಸ್ಕ್, “ಯಾವುದೇ ಸರ್ಕಾರವು ಕಂಟೆಂಟ್ ತೆಗೆದುಹಾಕಲು ಅಥವಾ ಸೆನ್ಸಾರ್‌ಶಿಪ್ ಮಾಡಲು ಕೋರಿದರೆ, ಅದು ಇನ್ಮುಂದೆ ಬಳಕೆದಾರರಿಗೆ ಸ್ಪಷ್ಟವಾಗಿ ಗೋಚರಿಸಲಿದೆ” ಎಂದು ತಿಳಿಸಿದ್ದರು. ಕಂಟೆಂಟ್ ತಿದ್ದುವಿಕೆ ಹಾಗೂ ನಿರ್ಬಂಧಗಳ ವಿಚಾರದಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ ಮಸ್ಕ್ ಈ ಬದಲಾವಣೆಯನ್ನು ಜಾರಿಗೆ ತಂದಿದ್ದಾರೆ. ಈ ಹೊಸ ಸೌಲಭ್ಯದಡಿ, ನಿರ್ದಿಷ್ಟ ಪೋಸ್ಟ್ ಅಥವಾ ಖಾತೆಯನ್ನು ತಡೆಹಿಡಿಯಲು ಯಾವ ಸರ್ಕಾರಿ ಸಂಸ್ಥೆ ಮನವಿ ಮಾಡಿದೆ ಮತ್ತು ಅದಕ್ಕೆ ನೀಡಲಾದ ಕಾನೂನು ಆಧಾರವೇನು ಎಂಬ ವಿವರಗಳು ಬಳಕೆದಾರರಿಗೆ ಲಭ್ಯವಾಗಲಿವೆ.
ಕಾನೂನಿನ ಚೌಕಟ್ಟಿನಲ್ಲೇ ಕಾರ್ಯಾಚರಣೆ ಅನಿವಾರ್ಯ
‘ಎಕ್ಸ್’ ಸಂಸ್ಥೆಯ ಈ ಹೊಸ ನೀತಿಗೆ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, “ಎಕ್ಸ್ ಸಂಸ್ಥೆಯು ದೇಶದ ಕಾನೂನನ್ನು ಪಾಲಿಸಲೇಬೇಕು” ಎಂದು ಖಡಕ್ಕಾಗಿ ನುಡಿದಿದ್ದಾರೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿನ ವಿಷಯಗಳನ್ನು ತಡೆಹಿಡಿಯಲು (Blocking Orders) ಸರ್ಕಾರಿ ಆದೇಶಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ
ಲಭ್ಯವಿರುವ ದತ್ತಾಂಶಗಳ ಪ್ರಕಾರ, ಈ ವರ್ಷದ ಮಾರ್ಚ್‌ನಿಂದ ಜುಲೈ ನಡುವೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್ ಸಂಸ್ಥೆಗಳು ಬ್ಲಾಕಿಂಗ್‌ಗಾಗಿ ಸುಮಾರು 1.95 ಲಕ್ಷ ಸರ್ಕಾರಿ ಆದೇಶಗಳನ್ನು ಸ್ವೀಕರಿಸಿವೆ. ಅಂದರೆ ಸರಾಸರಿ ದಿನಕ್ಕೆ 1,275 ಹಾಗೂ ಪ್ರತಿ 68 ಸೆಕೆಂಡಿಗೆ ಒಂದು ನಿರ್ದೇಶನ ಹೊರಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರಿ ನಿರ್ದೇಶನಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಮಸ್ಕ್ ಅವರ ನಿರ್ಧಾರವು ಸಾಮಾಜಿಕ ಮಾಧ್ಯಮ ನಿಯಂತ್ರಣ ಹಾಗೂ ಸರ್ಕಾರದ ಮಧ್ಯಪ್ರವೇಶದ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ : ಪುಣೆ ಅಂಗಡಿ ಲೈಸೆನ್ಸ್ ರದ್ದು ಕೇಸ್ : ಮಹಾರಾಷ್ಟ್ರ ಆಹಾರ ಇಲಾಖೆಗೆ ಹೈಕೋರ್ಟ್‌ನಿಂದ 5 ಲಕ್ಷ ರೂ. ದಂಡ


















