ಲಕ್ನೋ : ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆಂದು ದೇಶದ ಮೂಲೆ ಮೂಲೆಗಳಿಂದ ಭಕ್ತರು ನೀಡಿದ ಕಾಣಿಕೆ ಮತ್ತು ದೇಣಿಗೆಯ ಹಣದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಕೊನೆಗೂ ಉತ್ತರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದೆ. ದಿನದಿಂದ ದಿನಕ್ಕೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿರುವ ಈ ವಿವಾದದ ತನಿಖೆಗಾಗಿ ರಾಜ್ಯ ಸರ್ಕಾರ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಮತ್ತೊಂದೆಡೆ, ಮಂದಿರದ ಉದ್ಯೋಗಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ.
ತನಿಖೆಗೆ ಹಿರಿಯ ಅಧಿಕಾರಿಗಳ ತಂಡ
ರಾಮಮಂದಿರದ ಕಾಣಿಕೆ ಪೆಟ್ಟಿಗೆಗಳಿಂದ ಕೋಟ್ಯಂತರ ರೂಪಾಯಿ ಹಣ ನಾಪತ್ತೆಯಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಮಂದಿರದ ಟ್ರಸ್ಟ್ ಸ್ವತಂತ್ರ ತನಿಖೆಗೆ ಕೋರಿತ್ತು. ಆಡಳಿತ ಮಂಡಳಿಯ ಮನವಿಗೆ ಸ್ಪಂದಿಸಿರುವ ಯೋಗಿ ಆದಿತ್ಯನಾಥ್ ಸರ್ಕಾರ, ಲಕ್ನೋ ವಿಭಾಗೀಯ ಕಮಿಷನರ್ ವಿಜಯ್ ವಿಶ್ವಾಸ್ ಪಂತ್, ಐಜಿಪಿ ಕಿರಣ್ ಎಸ್. ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಅವರನ್ನೊಳಗೊಂಡ ಉನ್ನತ ಮಟ್ಟದ ಎಸ್‌ಐಟಿ ರಚಿಸಿದೆ. ಈ ಸಮಿತಿಯು ಮಂದಿರದ ಹಣಕಾಸು ನಿರ್ವಹಣೆ ಮತ್ತು ದೇಣಿಗೆ ಸಂಗ್ರಹಣೆಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಸಿಸಿಟಿವಿ ಪರಿಶೀಲನೆ, ನೌಕರನ ಬಂಧನ
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ಕಾರ್ಯಾಚರಣೆ ತಂಡ (SOG), ಮಂದಿರದ ಕಾಣಿಕೆ ಎಣಿಕೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಉದ್ಯೋಗಿಗಳನ್ನು ತನಿಖೆಯ ವ್ಯಾಪ್ತಿಗೆ ತಂದಿದೆ. ಮಂದಿರದ ಆವರಣದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ರುದೌಲಿ ಮೂಲದ ಲವ್ ಕುಶ್ ಎಂಬ ಉದ್ಯೋಗಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯ ಸಂದರ್ಭದಲ್ಲಿ ಶಂಕಿತನಿಂದ ಸ್ವಲ್ಪ ನಗದು ಹಣವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆಯಾದರೂ, ವಶಪಡಿಸಿಕೊಂಡ ಮೊತ್ತದ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ಮತ್ತೊಂದು ಮೂಲಗಳ ಪ್ರಕಾರ, ಉದ್ಯೋಗಿಯೊಬ್ಬನ ಮನೆಯಿಂದ 10 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ರಾಜಕೀಯ ಕೆಸರೆರಚಾಟ
ರಾಮಮಂದಿರ ಕಾಣಿಕೆ ವಿವಾದವು ಉತ್ತರ ಪ್ರದೇಶ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಂದಿರದ ಕಾಣಿಕೆ ಹಣ ನಾಪತ್ತೆಯಾಗಿರುವ ಬಗ್ಗೆ ನ್ಯಾಯಾಲಯಗಳು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಇನ್ನು, ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ದೇಣಿಗೆ ದುರುಪಯೋಗದ ಬಗ್ಗೆ ತಮಗೆ ಮಾಹಿತಿ ಇರುವುದಾಗಿ ಹೇಳಿಕೆ ನೀಡಿದರೆ, ಮತ್ತೊಬ್ಬ ಬಿಜೆಪಿ ನಾಯಕ ರಜನೀಶ್ ಸಿಂಗ್ ಅವರು ಮಂದಿರದ ಆದಾಯ, ವೆಚ್ಚ ಮತ್ತು ಬ್ಯಾಂಕ್ ಖಾತೆಗಳ ವಿವರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇತ್ತ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಅವರು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಆಂತರಿಕ ಆಡಿಟ್ ನಡೆಯುತ್ತಿದ್ದು, ಸದ್ಯಕ್ಕೆ ಯಾವುದೇ ಹಣ ದುರುಪಯೋಗವಾಗಿರುವ ಸಾಕ್ಷ್ಯ ಸಿಕ್ಕಿಲ್ಲ ಎಂದಿದ್ದಾರೆ.
ಭಕ್ತರ ನಂಬಿಕೆಗೆ ದ್ರೋಹ ಎಸಗಬೇಡಿ: ವಿನಯ್ ಕಟಿಯಾರ್
ವಿವಾದದ ಕುರಿತು ಸುದ್ದಿಗೋಷ್ಠಿ ನಡೆಸಿ ತೀವ್ರ ಕಳವಳ ವ್ಯಕ್ತಪಡಿಸಿರುವ ಹಿರಿಯ ಬಿಜೆಪಿ ನಾಯಕ ವಿನಯ್ ಕಟಿಯಾರ್, ರಾಮಮಂದಿರದಲ್ಲಿ ನಡೆಯುವ ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಕಳ್ಳತನವು ಕೋಟ್ಯಂತರ ಭಕ್ತರ ನಂಬಿಕೆಗೆ ಬಗೆಯುವ ದ್ರೋಹವಾಗಿದೆ ಎಂದಿದ್ದಾರೆ. “ರಾಮಮಂದಿರ ಬರೀ ಧಾರ್ಮಿಕ ಕಟ್ಟಡವಲ್ಲ, ಅದು ದಶಕಗಳ ಹೋರಾಟ, ತ್ಯಾಗ ಮತ್ತು ಭಕ್ತಿಯ ಸಂಕೇತ” ಎಂದು ಭಾವುಕರಾದ ಅವರು, ಈ ಹಗರಣದ ಹಿಂದೆ ಯಾರೇ ಇದ್ದರೂ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಎಸ್‌ಐಟಿ ತನಿಖೆ ನಿಷ್ಪಕ್ಷವಾಗಿ ನಡೆಯಬೇಕಿದ್ದು, ಸದ್ಯ ಇಡೀ ದೇಶದ ಕಣ್ಣು ಅಯೋಧ್ಯೆಯ ತನಿಖೆಯತ್ತ ನೆಟ್ಟಿದೆ.
ಇದನ್ನೂ ಓದಿ : ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 3 ವರ್ಷದ ಮಗುವಿಗೆ ‘ಫಾರ್ಮಾಲಿನ್’ ಚುಚ್ಚಿ ಕೊಂದ ನರ್ಸ್!



















