ಭೋಪಾಲ್ : ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (AIIMS) ಯಲ್ಲಿ ನರ್ಸ್‌ಗಳ ಭೀಕರ ನಿರ್ಲಕ್ಷ್ಯಕ್ಕೆ 3 ವರ್ಷದ ಮಗುವೊಂದು ಬಲಿಯಾಗಿದೆ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಗುವಿಗೆ ಔಷಧಿಯ ಬದಲಾಗಿ ಜೈವಿಕ ಮಾದರಿಗಳನ್ನು ಸಂರಕ್ಷಿಸಲು ಬಳಸುವ ತೀವ್ರ ವಿಷಕಾರಿ ರಾಸಾಯನಿಕ ‘ಫಾರ್ಮಾಲಿನ್’ ಅನ್ನು ಚುಚ್ಚುಮದ್ದಿನ ಮೂಲಕ ನೀಡಿರುವ ಕಾರಣ ಮಗು ಸಾವನ್ನಪ್ಪಿದೆ. 2025ರ ಡಿಸೆಂಬರ್‌ನಲ್ಲಿ ನಡೆದಿದ್ದ ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಆಂತರಿಕ ತನಿಖಾ ವರದಿ ಹೊರಬಿದ್ದ ಬೆನ್ನಲ್ಲೇ, ಇದೀಗ ಇಬ್ಬರು ನರ್ಸ್‌ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ತಂದೆ ಬೇಡಿಕೊಂಡರೂ ಕೇಳದ ನರ್ಸ್
ಸಾಗರ್ ಜಿಲ್ಲೆಯ ಬಿನಾ ತಹಸಿಲ್‌ನ ಕೌರ್ಜಾ ಗ್ರಾಮದ ನಿವಾಸಿಯಾದ ಸಿದ್ಧಾರ್ಥ್ ಯಾದವ್ ಎಂಬವರ ಪುತ್ರ ಸಾರ್ಥಕ್ ಯಾದವ್ (3) ಮೃತಪಟ್ಟ ದುರ್ದೈವಿ. ರಕ್ತದ ಕ್ಯಾನ್ಸರ್ ಪೀಡಿತನಾಗಿದ್ದ ಈ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಡಿಸೆಂಬರ್ 17ರ ಬೆಳಗ್ಗೆ ಮಗುವಿಗೆ ಅಳವಡಿಸಲಾಗಿದ್ದ ಐವಿ (IV) ಲೈನ್ ಬ್ಲಾಕ್ ಆಗಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ನರ್ಸ್, ವಾರ್ಡ್‌ನಲ್ಲಿದ್ದ ‘F’ ಎಂದು ಬರೆಯಲಾಗಿದ್ದ ಸಿರಿಂಜ್ ಎತ್ತಿಕೊಂಡು, ಯಾವುದೇ ಪರಿಶೀಲನೆ ನಡೆಸದೆ ನೇರವಾಗಿ ಐವಿ ಬಾಟಲಿಗೆ ಇಂಜೆಕ್ಟ್ ಮಾಡಿದ್ದಾರೆ. ಮಗುವಿನ ತಂದೆ ಸಿದ್ಧಾರ್ಥ್ ಅವರು ಮೂರು ಬಾರಿ ನರ್ಸ್ ಅನ್ನು ತಡೆಯಲು ಯತ್ನಿಸಿದರೂ, “ಇಲ್ಲಿ ಡಾಕ್ಟರ್ ನೀನಾ ಅಥವಾ ನಾನಾ?” ಎಂದು ಗದರಿಸಿ ನರ್ಸ್ ಆ ರಾಸಾಯನಿಕವನ್ನು ಮಗುವಿನ ದೇಹಕ್ಕೆ ಸೇರಿಸಿದ್ದಾರೆ.
ಕ್ಷಣಾರ್ಧದಲ್ಲಿ ಪ್ರಜ್ಞೆ ತಪ್ಪಿದ ಮಗು
ವಿಷಕಾರಿ ರಾಸಾಯನಿಕ ದೇಹ ಸೇರುತ್ತಿದ್ದಂತೆ ಮಗುವಿನ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಮಗು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಇಡೀ ವಾರ್ಡ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ತಕ್ಷಣವೇ ಮಗುವನ್ನು ಮಕ್ಕಳ ತೀವ್ರ ನಿಗಾ ಘಟಕಕ್ಕೆ (PICU) ದಾಖಲಿಸಿ ವೈದ್ಯರು ಸಿಪಿಆರ್ (CPR) ಸೇರಿದಂತೆ ತುರ್ತು ಚಿಕಿತ್ಸೆ ನೀಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಬೆಳಗ್ಗೆ 8:45ರ ಸುಮಾರಿಗೆ ಮಗು ಕೊನೆಯುಸಿರೆಳೆದಿದೆ. ಘಟನೆ ನಡೆದ ತಕ್ಷಣ ಆಸ್ಪತ್ರೆಯ ಸಿಬ್ಬಂದಿ ಸಾಕ್ಷ್ಯ ನಾಶಪಡಿಸಲು ಐವಿ ಬಾಟಲಿಯನ್ನು ಕಿತ್ತುಕೊಳ್ಳಲು ಯತ್ನಿಸಿದರು ಎಂದು ಮಗುವಿನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಆಂತರಿಕ ತನಿಖೆಯಿಂದ ಬಯಲಾಯ್ತು ಸತ್ಯ
ಘಟನೆಗೆ ಸಂಬಂಧಿಸಿದಂತೆ ಏಮ್ಸ್ ಆಡಳಿತ ಮಂಡಳಿ ನಡೆಸಿದ ಆಂತರಿಕ ತನಿಖೆಯಲ್ಲಿ ನರ್ಸ್ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ನೇರ ಕಾರಣ ಎಂಬುದು ಸಾಬೀತಾಗಿದೆ. ಬಯಾಪ್ಸಿ ಮಾದರಿಗಾಗಿ ಸಿರಿಂಜ್‌ನಲ್ಲಿ ತುಂಬಿಸಿಡಲಾಗಿದ್ದ ಫಾರ್ಮಾಲಿನ್ ರಾಸಾಯನಿಕವನ್ನು ವಾರ್ಡ್‌ನಲ್ಲಿ ಸುರಕ್ಷಿತವಾಗಿ ಇಡದೆ ನಿರ್ಲಕ್ಷ್ಯ ವಹಿಸಲಾಗಿತ್ತು. ಮಗುವಿಗೆ ಚುಚ್ಚುಮದ್ದು ನೀಡಿದ ನರ್ಸಿಂಗ್ ಅಧಿಕಾರಿ ಮಧುಬಾಲಾ ಶರ್ಮಾ ಮತ್ತು ರಾಸಾಯನಿಕವನ್ನು ಬೇಜವಾಬ್ದಾರಿತನದಿಂದ ಮುಕ್ತವಾಗಿಟ್ಟಿದ್ದ ಮತ್ತೊಬ್ಬ ನರ್ಸಿಂಗ್ ಅಧಿಕಾರಿ ಅನುಕಾ ಗುಜರಾತಿ ಅವರನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ.
ಏಮ್ಸ್ ನೀಡಿದ ಅಧಿಕೃತ ತನಿಖಾ ವರದಿಯ ಆಧಾರದ ಮೇಲೆ ಭೋಪಾಲ್‌ನ ಬಾಗ್ಸೆವೇನಿಯಾ ಪೊಲೀಸ್ ಠಾಣೆಯಲ್ಲಿ ಇಬ್ಬರೂ ನರ್ಸ್‌ಗಳ ವಿರುದ್ಧ
ಪ್ರಕರಣ ದಾಖಲಾಗಿದೆ. ಮಧುಬಾಲಾ ಶರ್ಮಾ ವಿರುದ್ಧ ನಿರ್ಲಕ್ಷ್ಯದ ಕಾರಣದಿಂದ ಸಾವಿಗೆ ಕಾರಣವಾದ ಆರೋಪದಡಿ ಬಿಎನ್ಎಸ್ ಸೆಕ್ಷನ್ 106(1) ಮತ್ತು ಅನುಕಾ ಗುಜರಾತಿ ವಿರುದ್ಧ ಅಪಾಯಕಾರಿ ರಾಸಾಯನಿಕವನ್ನು ನಿರ್ಲಕ್ಷ್ಯದಿಂದ ನಿರ್ವಹಿಸಿದ ಆರೋಪದಡಿ (ಸೆಕ್ಷನ್ 286) ಪ್ರಕರಣ ದಾಖಲಿಸಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಇಬ್ಬರೂ ಆರೋಪಿ ನರ್ಸ್‌ಗಳ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಮಾದರಿ ಅಂಗಾಂಶಗಳು ಹಾಗೂ ಮೃತದೇಹಗಳು ಕೊಳೆಯದಂತೆ ಇಡಲು ಲ್ಯಾಬ್‌ಗಳಲ್ಲಿ ಬಳಸುವ ತೀವ್ರ ವಿಷಕಾರಿ ಫಾರ್ಮಾಲಿನ್ ಅನ್ನು ಮಗುವಿನ ನರಕ್ಕೆ ನೇರವಾಗಿ ನೀಡಿದ ಈ ಘಟನೆ ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸಿದೆ.
ಇದನ್ನೂ ಓದಿ : ಬಿಹಾರದಲ್ಲಿ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಂದ ರೈಲು ರೋಕೋ : ಕಲ್ಲು ತೂರಾಟ, ಲಾಠಿಚಾರ್ಜ್



















