ಅಯೋಧ್ಯೆ : ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮಮಂದಿರದ ದೇಣಿಗೆ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಪ್ರಮುಖ ಆರೋಪಿ ಪೊಲೀಸ್ ವಿಚಾರಣೆಯಲ್ಲಿ ಆಘಾತಕಾರಿ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾನೆ. ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ಮಂಗಳವಾರ ನಡೆಸಿದ ಸುಮಾರು ಎರಡು ಗಂಟೆಗಳ ತೀವ್ರ ವಿಚಾರಣೆಯ ಸಂದರ್ಭದಲ್ಲಿ, ಆರೋಪಿ ಅವಿನಾಶ್ ಶುಕ್ಲಾ ಕೋಟ್ಯಂತರ ರೂಪಾಯಿ ದೇಣಿಗೆ ಹಣವನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಸಿಸಿಟಿವಿ ಕಣ್ಣು ತಪ್ಪಿಸಿ ಮಂದಿರದ ಶೌಚಾಲಯಗಳಲ್ಲಿ ತಾತ್ಕಾಲಿಕವಾಗಿ ಹಣವನ್ನು ಬಚ್ಚಿಡುತ್ತಿದ್ದ ವಿಧಾನ ಹಾಗೂ ದೇಣಿಗೆ ಎಣಿಕೆ ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ಎಳೆಎಳೆಯಾಗಿ ವಿವರಿಸಿದ್ದಾನೆ.
ಸಿಸಿಟಿವಿ ಕ್ಯಾಮೆರಾಗಳ ಲೋಪದೋಷಗಳೇ ಅಸ್ತ್ರ
ವಿಚಾರಣೆಯ ವೇಳೆ ಆರೋಪಿಗಳು ಮಂದಿರದ ಭದ್ರತಾ ವ್ಯವಸ್ಥೆಯನ್ನು ಎಷ್ಟು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಂಡಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಮಂದಿರದ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ನಿಖರವಾದ ಸ್ಥಳಗಳು ಆರೋಪಿಗಳಿಗೆ ತಿಳಿದಿದ್ದವು. ಹಣ ಎಣಿಕೆ ಮಾಡುವ ಸಂದರ್ಭದಲ್ಲಿ ಒಬ್ಬ ಆರೋಪಿ ಹಣವನ್ನು ಕದಿಯುತ್ತಿದ್ದರೆ, ಉಳಿದವರು ಆತನ ಸುತ್ತಲೂ ನಿಂತು ಭದ್ರತಾ ಸಿಬ್ಬಂದಿಗೆ ಕಾಣದಂತೆ ಕಾವಲು ಕಾಯುತ್ತಿದ್ದರು. ನಿಯಂತ್ರಣ ಕೊಠಡಿಯಿಂದ ಕ್ಯಾಮೆರಾಗಳನ್ನು ಮೇಲ್ನೋಟಕ್ಕೆ ಮೇಲ್ವಿಚಾರಣೆ ಮಾಡಲಾಗುತ್ತಿದ್ದರೂ, ಭದ್ರತಾ ಸಿಬ್ಬಂದಿ ಇವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು, ಕದ್ದ ಹಣವನ್ನು ಮೊದಲು ಶೌಚಾಲಯಗಳಲ್ಲಿ ಅಡಗಿಸಿಟ್ಟು, ನಂತರ ಸೂಕ್ತ ಸಮಯ ನೋಡಿಕೊಂಡು ಅಲ್ಲಿಂದ ಹೊರಗೆ ಸಾಗಿಸುತ್ತಿದ್ದರು ಎಂದು ಅವಿನಾಶ್ ಶುಕ್ಲಾ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ದೊಡ್ಡ ಭ್ರಷ್ಟಾಚಾರದ ಜಾಲ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂದಿರದ ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕಳೆದ ವಾರವಷ್ಟೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಹಣ ಎಣಿಕೆ ಪ್ರಕ್ರಿಯೆಯಲ್ಲಿ ಅನಿಲ್ ಮಿಶ್ರಾ ಅವರ ಪಾತ್ರವೂ ಇತ್ತು ಎಂದು ಆರೋಪಿ ಹೇಳಿಕೆ ನೀಡಿದ್ದು, ತನಿಖೆಯ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿದೆ. ಸದ್ಯ ಬಂಧಿತರಾಗಿರುವ ಎಂಟು ಆರೋಪಿಗಳ ಪೈಕಿ ಚಂಪತ್ ರಾಯ್ ಅವರ ಆಪ್ತ ಎನ್ನಲಾದ ರಾಮಶಂಕರ್ ಅಲಿಯಾಸ್ ಟಿನ್ನು ಯಾದವ್, ಇಡೀ ಕಳವು ಜಾಲದ ಪ್ರಮುಖ ಸೂತ್ರಧಾರಿಯಾಗಿದ್ದ. ತನಿಖೆಯ ಪ್ರಕಾರ, ಹಣ ಎಣಿಕೆ ಕೋಣೆಯ ಒಂದು ಕೀ ಬ್ಯಾಂಕ್ ಉದ್ಯೋಗಿಗಳ ಬಳಿ ಇದ್ದರೆ, ಮತ್ತೊಂದು ಕೀ ಈ ಟಿನ್ನು ಯಾದವ್ ಬಳಿ ಇರುತ್ತಿತ್ತು. ಟ್ರಸ್ಟ್‌ನ ಪ್ರಮುಖರೊಂದಿಗೆ ತಮಗಿದ್ದ ನಿಕಟ ಸಂಪರ್ಕದ ಕಾರಣದಿಂದಾಗಿ ಯಾರೂ ತಮ್ಮನ್ನು ಸಂಶಯದಿಂದ ನೋಡುತ್ತಿರಲಿಲ್ಲ ಎಂದು ಆರೋಪಿ ತಿಳಿಸಿದ್ದಾನೆ.
ಕದ್ದ ಹಣದಲ್ಲಿ ಆಸ್ತಿ ಖರೀದಿ
ಕದ್ದ ಕೋಟ್ಯಂತರ ರೂಪಾಯಿ ದೇಣಿಗೆ ಹಣವನ್ನು ಆರೋಪಿಗಳು ತಮ್ಮ ವೈಯಕ್ತಿಕ ಸುಖಭೋಗಗಳಿಗೆ ಹಾಗೂ ಆಸ್ತಿ ಖರೀದಿಗೆ ಬಳಸಿಕೊಂಡಿದ್ದಾರೆ. ಅವಿನಾಶ್ ಶುಕ್ಲಾ ನೀಡಿರುವ ಮಾಹಿತಿ ಆಧರಿಸಿ, ಆರೋಪಿಗಳು ಖರೀದಿಸಿರುವ ಜಮೀನು ಹಾಗೂ ಮನೆಗಳ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಹಗರಣ ಎಷ್ಟು ದಿನಗಳಿಂದ ನಡೆಯುತ್ತಿತ್ತು ಮತ್ತು ಇದರಲ್ಲಿ ಇನ್ನೂ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಉತ್ತರ ಪ್ರದೇಶ ಸರ್ಕಾರವು ಜೂನ್ 13 ರಂದು ಈ ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.
ಆದರೆ, ಈ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ಆರಂಭವಾಗುವ ಮುನ್ನವೇ ಅಂದರೆ ಜೂನ್ 5 ರಂದೇ ಟ್ರಸ್ಟ್ ಅಧಿಕಾರಿಗಳು ಅವಿನಾಶ್ ಶುಕ್ಲಾ ಮನೆಯಿಂದ 58 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದರು ಮತ್ತು ಉಳಿದ ಹಣವನ್ನು ಜೂನ್ 5 ರಿಂದ 8ರ ನಡುವೆ ಬ್ಯಾಂಕ್ ವರ್ಗಾವಣೆಗಳ ಮೂಲಕ ಮರಳಿ ಪಡೆದಿದ್ದರು ಎಂಬ ಸಂಗತಿಯೂ ಈಗ ಬೆಳಕಿಗೆ ಬಂದಿದ್ದು, ಇಡೀ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ.
ಇದನ್ನೂ ಓದಿ : ಸಂಪೂರ್ಣ ಗೋಹತ್ಯೆ ನಿಷೇಧ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ!



















