ಭೋಪಾಲ್ : ಮಧ್ಯಪ್ರದೇಶದ ಭೋಪಾಲ್‌ನ ಕಟಾರಾ ಹಿಲ್ಸ್ ಪ್ರದೇಶದ ನಿವಾಸದಲ್ಲಿ ಮೇ 12ರಂದು ಶವವಾಗಿ ಪತ್ತೆಯಾದ ಮಾಡೆಲ್ ಹಾಗೂ ಮಾಜಿ ನಟಿ ತ್ವಿಷಾ ಶರ್ಮಾ (33) ಅವರ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಆರೋಪ ಎದುರಿಸುತ್ತಿರುವ ತ್ವಿಷಾ ಅವರ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರು ಇದೀಗ ತ್ವಿಷಾ ಪೋಷಕರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ತ್ವಿಷಾಳನ್ನು ಆಕೆಯ ಪೋಷಕರು ಚಿಕ್ಕ ವಯಸ್ಸಿನಲ್ಲೇ ಗ್ಲಾಮರ್ ಲೋಕಕ್ಕೆ ತಳ್ಳಿ, ನಂತರ ಆಕೆಯಿಂದ ದೂರ ಸರಿದಿದ್ದರು ಎಂದು ಗಿರಿಬಾಲಾ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ. ಕಳೆದ ಐದು ತಿಂಗಳುಗಳಿಂದ ಪೋಷಕರು ಮಗಳನ್ನು ನೋಡಲು ಬಂದಿರಲಿಲ್ಲ ಮತ್ತು ಕೇವಲ ಆಕೆಯ ಸಂಪಾದನೆಯ ಮೇಲಷ್ಟೇ ಕಣ್ಣಿಟ್ಟಿದ್ದರು ಎಂದು ಅವರು ಆರೋಪಿಸಿದ್ದಾರೆ.

ತ್ವಿಷಾ ಅವರ ಆರೋಗ್ಯ ಮತ್ತು ವೈಯಕ್ತಿಕ ಜೀವನದ ಕುರಿತು ಮಾತನಾಡಿರುವ ಅತ್ತೆ ಗಿರಿಬಾಲಾ, ಸೊಸೆಗೆ ತೀವ್ರ ಸ್ವರೂಪದ ಮಾನಸಿಕ ಅಸ್ವಸ್ಥತೆ (ಸ್ಕಿಜೋಫ್ರೇನಿಯಾ) ಇತ್ತು. ಆಕೆಗೆ ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಗರ್ಭಾವಸ್ಥೆಯಲ್ಲಿದ್ದಾಗ ತ್ವಿಷಾ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಸೇವಿಸುತ್ತಿದ್ದಳು. ಮೇ ತಿಂಗಳ ಆರಂಭದಲ್ಲಿ ಆಕೆ ಸ್ವಇಚ್ಛೆಯಿಂದ ಗರ್ಭಪಾತದ ಮಾತ್ರೆಗಳನ್ನು ತೆಗೆದುಕೊಂಡಿದ್ದಳು ಎಂದೂ ಅವರು ಆರೋಪಿಸಿದ್ದಾರೆ. ತ್ವಿಷಾ ತಂದೆ ದೀರ್ಘಕಾಲದಿಂದ ಕಜಕಿಸ್ತಾನ್, ಉಜ್ಬೇಕಿಸ್ತಾನ್‌ನ ಫಾರ್ಮಾಸ್ಯುಟಿಕಲ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವುದರಿಂದ, ಔಷಧಿಗಳ ಲಭ್ಯತೆಯ ಹಿಂದೆ ಅವರ ಕೈವಾಡವಿರಬಹುದು ಎಂಬ ಸಂಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ತ್ವಿಷಾ ಶರ್ಮಾ ಅವರ ತಂದೆ ನವನಿಧಿ ಶರ್ಮಾ ಅವರು ಅಳಿಯ ಸಮರ್ಥ್ ಮತ್ತು ಆತನ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಅಳಿಯ ಮೇಲ್ನೋಟಕ್ಕೆ ಒಳ್ಳೆಯವನಂತೆ ನಟಿಸುವ “ಕುರಿಯಂತೆ ಕಾಣುವ ತೋಳ” ಎಂದು ಅವರು ಬಣ್ಣಿಸಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಪರೋಕ್ಷವಾಗಿ ಹಣದ ಬೇಡಿಕೆಗಳು ಶುರುವಾಗಿದ್ದವು. ತ್ವಿಷಾ ತನ್ನ ಕೆಲಸ ಕಳೆದುಕೊಂಡ ನಂತರ ಮನೆಯಲ್ಲಿ ಕಿರುಕುಳ ಮತ್ತಷ್ಟು ಹೆಚ್ಚಾಯಿತು ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಈ ಕುಟುಂಬದ ಮೊದಲನೇ ಸೊಸೆ ಕೂಡ ಇವರ ಕಿರುಕುಳ ತಾಳಲಾರದೆ ವಿಚ್ಛೇದನ ಪಡೆದಿದ್ದರು ಎಂಬ ಕಹಿ ಇತಿಹಾಸವನ್ನು ನವನಿಧಿ ಶರ್ಮಾ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಗ್ಲಾಮರ್ ಲೋಕದ ಬೆಡಗಿಯ ದುರಂತ ಅಂತ್ಯ:
ಮೂಲತಃ ನೋಯ್ಡಾದವರಾದ ತ್ವಿಷಾ ಶರ್ಮಾ, ಎಂಬಿಎ (MBA) ಪದವೀಧರೆಯಾಗಿದ್ದರು. 2009ರಿಂದ 2012ರ ಅವಧಿಯಲ್ಲಿ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ಅವರು ಕಠಿಣ ಪರಿಶ್ರಮದಿಂದ ‘ಮಿಸ್ ಪುಣೆ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಆನಂತರ ಜಾಹೀರಾತುಗಳು ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತೆಲುಗಿನ ‘ಮುಗ್ಗುರು ಮೊನಗಾಳ್ಳು’ ಚಿತ್ರದಲ್ಲಿ ಹಾಗೂ ‘ಜರಾ ಸಂಭಾಲ್ ಕೆ’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದರು. ಡೇಟಿಂಗ್ ಆಪ್ ಮೂಲಕ ಪರಿಚಯವಾದ ಸಮರ್ಥ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದ ತ್ವಿಷಾ, ಮದುವೆಯಾದ ಕೇವಲ 5 ತಿಂಗಳಿಗೆ ನಿಗೂಢವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಪ್ರಕರಣವು ನ್ಯಾಯಾಲಯದಲ್ಲಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ವಿಭಜನೆ ಪೂರ್ವದ ಇತಿಹಾಸಕ್ಕೆ ಮರಳಿದ ಲಾಹೋರ್ : ರಸ್ತೆಗಳಿಗಿದ್ದ ಹಿಂದೂ, ಸಿಖ್ ಹೆಸರನ್ನು ಮರುಸ್ಥಾಪಿಸಿದ ಪಾಕ್



















