ಹೈದರಾಬಾದ್ : ತೆಲಂಗಾಣ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳು ಇದೀಗ ಬಹಿರಂಗವಾಗಿ, ಜಗಜ್ಜಾಹೀರಾಗುತ್ತಿವೆ. ಹಿರಿಯ ಸಚಿವೆ ಕೊಂಡ ಸುರೇಖಾ ಅವರ ಪುತ್ರಿ ಕೊಂಡ ಸುಶ್ಮಿತಾ ಅವರು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದ್ದು, ಬಹಿರಂಗ ಸವಾಲನ್ನೂ ಹಾಕಿದ್ದಾರೆ. ಪರ್ಕಾಲ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ರೇವೂರಿ ಪ್ರಕಾಶ್ ರೆಡ್ಡಿ ಅವರಿಗೆ ಮುಖ್ಯಮಂತ್ರಿ ಬೆಂಬಲ ಸೂಚಿಸಿರುವುದನ್ನು ಖಂಡಿಸಿರುವ ಸುಶ್ಮಿತಾ, “ಎರಡು ವರ್ಷ ಕಾಯುವುದು ಏಕೆ? ಅವರನ್ನು ಈಗಲೇ ರಾಜೀನಾಮೆ ನೀಡಲು ಹೇಳಿ. ನೀನು ಬಂದರೂ, ನಿನ್ನಪ್ಪ ಬಂದರೂ, ನಿಮ್ಮಜ್ಜನನ್ನೇ ಕರೆದುಕೊಂಡು ಬಂದರೂ, ಪರ್ಕಾಲದ ಮುಂದಿನ ಶಾಸಕಿ ನಾನೇ” ಎಂದು ಏಕವಚನದಲ್ಲೇ ಗುಡುಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ನೀಡದಿದ್ದರೂ ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ ಸುಶ್ಮಿತಾ, “ನನ್ನ ಟಿಕೆಟ್ ನಿರ್ಧರಿಸಲು ರೇವಂತ್ ರೆಡ್ಡಿ ಯಾರು?” ಎಂದು ಪ್ರಶ್ನಿಸಿದ್ದಾರೆ. ರೇವಂತ್ ರೆಡ್ಡಿ ಅವರ ಅಹಂಕಾರದ ನಾಯಕತ್ವದಿಂದಾಗಿ ಕಾಂಗ್ರೆಸ್ ಪಕ್ಷವು ‘ಟಿಡಿಪಿ ಕಾಂಗ್ರೆಸ್’ ಆಗಿ ಬದಲಾಗಿದೆ ಎಂದು ಕಿಡಿಕಾರಿದ ಅವರು, ಹಳೆಯ ಕಾಂಗ್ರೆಸ್ಸಿಗರು ಈ ಆಡಳಿತದಿಂದ ಅಸಮಾಧಾನಗೊಂಡಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದಲ್ಲದೆ, ಮುಖ್ಯಮಂತ್ರಿಯವರ ಸಹೋದರ ಭಾಗಿಯಾಗಿದ್ದಾರೆ ಎನ್ನಲಾದ 200 ಕೋಟಿ ರೂ. ಮೌಲ್ಯದ ಭೂ ಹಗರಣ ಸೇರಿದಂತೆ ರೇವಂತ್ ಕುಟುಂಬದ ಇತರ ಹಗರಣಗಳನ್ನು ಶೀಘ್ರದಲ್ಲೇ ಬಯಲಿಗೆಳೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶಿಸ್ತು ಕ್ರಮಕ್ಕೆ ಮುಂದಾದ ಕಾಂಗ್ರೆಸ್ ಹೈಕಮಾಂಡ್
ಮುಖ್ಯಮಂತ್ರಿಯವರ ವಿರುದ್ಧ ಸಚಿವರ ಮಗಳೇ ನೇರ ದಾಳಿ ನಡೆಸಿರುವುದು ಪಕ್ಷಕ್ಕೆ ಭಾರಿ ಮುಜುಗರ ಉಂಟುಮಾಡಿದ್ದು, ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಪುತ್ರಿಯ ಹೇಳಿಕೆ ಕುರಿತು ಮೂರು ದಿನಗಳ ಒಳಗಾಗಿ ಲಿಖಿತ ವಿವರಣೆ ನೀಡುವಂತೆ ಸಚಿವೆ ಕೊಂಡ ಸುರೇಖಾ ಅವರಿಗೆ ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿಯು ನೋಟಿಸ್ ನೀಡಿದೆ. ಇದರ ಜೊತೆಗೆ, ಹಿರಿಯ ನಾಯಕ ಜಕ್ಕಿಡಿ ಪ್ರಭಾಕರ್ ರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದ್ದು, ಮಾಜಿ ಸಚಿವ ಚಿನ್ನಾ ರೆಡ್ಡಿ ಅವರಿಗೂ ನೋಟಿಸ್ ನೀಡಲಾಗಿದೆ. ಸಚಿವ ಮಟ್ಟದಲ್ಲೇ ಇಂತಹ ಶಿಸ್ತು ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂದು ಹೈಕಮಾಂಡ್ ಸ್ಪಷ್ಟಪಡಿಸಿದೆ.
ಹಳೆಯ ಮತ್ತು ಹೊಸ ಕಾಂಗ್ರೆಸ್ಸಿಗರ ನಾಯಕತ್ವದ ಸಂಘರ್ಷ
ಈ ಘಟನೆಯು ತೆಲಂಗಾಣ ಕಾಂಗ್ರೆಸ್‌ನಲ್ಲಿ ಬಹುಕಾಲದಿಂದ ಇರುವ ‘ಹಳೆಯ ಕಾಂಗ್ರೆಸ್ಸಿಗರು ಮತ್ತು ಹೊಸ ನಾಯಕರು’ ಎಂಬ ಸಂಘರ್ಷವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಸೇರಿದಂತೆ ಹಲವು ಹಿರಿಯ ನಾಯಕರು ರೇವಂತ್ ರೆಡ್ಡಿ ಅವರ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಈಗಾಗಲೇ ಅಸಮಾಧಾನ ಹೊಂದಿದ್ದಾರೆ. ಮತ್ತೊಂದೆಡೆ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಕೂಡ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಈ ಆಂತರಿಕ ಕದನವನ್ನು ಹೈಕಮಾಂಡ್ ಹೇಗೆ ಶಮನಗೊಳಿಸಲಿದೆ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಟೆಸ್ಟ್‌ನಲ್ಲಿ ಮಾನವ್ ಸುತಾರ್ ಮೋಡಿ : IPL ಆಮಿಷಕ್ಕೆ ಒಳಗಾಗದೆ ನೈಸರ್ಗಿಕ ಆಟ ಉಳಿಸಿಲು ಪೂಜಾರ ಸಲಹೆ


















