ಚೆನ್ನೈ : ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ‘ (TVK) 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆಯನ್ನು ಅನುಭವಿಸುತ್ತಿದೆ. ಈ ಅತಂತ್ರ ಜನಾದೇಶವನ್ನು ಬಳಸಿಕೊಂಡು ವಿಜಯ್ ಅವರನ್ನು ಅಧಿಕಾರದಿಂದ ದೂರವಿಡಲು ದಶಕಗಳ ಕಾಲ ಪರಸ್ಪರ ಬದ್ಧ ವೈರಿಗಳಾಗಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಕೈಜೋಡಿಸುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.
ಅಸಾಧ್ಯವಾದ ಮೈತ್ರಿಗೆ ಅಡಿಪಾಯ?
ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ನಡುವಿನ ಮೈತ್ರಿ ಎಂಬುದು ತಮಿಳುನಾಡು ರಾಜಕೀಯದಲ್ಲಿ ಕಲ್ಪನೆಗೂ ನಿಲುಕದ ವಿಚಾರ. ಆದರೆ ದ್ರಾವಿಡ ರಾಜಕೀಯಕ್ಕೆ ವಿಜಯ್ ಅವರ ಪ್ರವೇಶವು ಈ ಎರಡು ದ್ರಾವಿಡ ಪಕ್ಷಗಳ ಅಸ್ತಿತ್ವಕ್ಕೆ ಸವಾಲೊಡ್ಡಿದೆ. ವಿಜಯ್ ಅಧಿಕಾರ ಹಿಡಿದರೆ ಮುಂದಿನ ದಶಕಗಳ ಕಾಲ ತಮ್ಮ ಪಕ್ಷಗಳು ಮೂಲೆಗುಂಪಾಗಬಹುದು ಎಂಬ ಆತಂಕ ಸ್ಟಾಲಿನ್ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಅವರನ್ನ ಒಂದಾಗುವಂತೆ ಪ್ರೇರೇಪಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಡಿಎಂಕೆಯ ಕಠಿಣ ಷರತ್ತುಗಳು
ಮೈತ್ರಿ ಮಾತುಕತೆಗಳ ನಡುವೆ ಡಿಎಂಕೆ ಒಂದು ಮಹತ್ವದ ದಾಳ ಉರುಳಿಸಿದೆ. ಎಐಎಡಿಎಂಕೆ ಮೊದಲು ತನ್ನ ಮೈತ್ರಿಕೂಟದಿಂದ ‘ಕೋಮುವಾದಿ’ ಬಿಜೆಪಿಯನ್ನು ಹೊರಹಾಕಬೇಕು ಎಂಬ ಷರತ್ತನ್ನು ವಿಧಿಸಿದೆ. ಈ ಷರತ್ತನ್ನು ಎಐಎಡಿಎಂಕೆ ಒಪ್ಪಿಕೊಂಡರೆ ಮಾತ್ರ ಹೊರಗಿನಿಂದ ಬೆಂಬಲ ನೀಡುವ ಬಗ್ಗೆ ಅಥವಾ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಡಿಎಂಕೆ ಆಲೋಚಿಸಲಿದೆ. ಇದರ ಜೊತೆಗೆ, ವಿಜಯ್ ಅವರಿಗೆ ಬೆಂಬಲ ನೀಡಲು ಮುಂದಾಗಿದ್ದ ವಿಸಿಕೆ (VCK) ಪಕ್ಷವನ್ನು ತನ್ನತ್ತ ಸೆಳೆಯುವಲ್ಲಿ ಡಿಎಂಕೆ ಯಶಸ್ವಿಯಾಗುತ್ತಿರುವುದು ವಿಜಯ್ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿದೆ.
ವಿಜಯ್‌ಗೆ ಕಾಂಗ್ರೆಸ್ ಸಾಥ್
ಒಂದೆಡೆ ದ್ರಾವಿಡ ಪಕ್ಷಗಳು ಒಂದಾಗುತ್ತಿದ್ದರೆ, ಇನ್ನೊಂದೆಡೆ ನಟ ವಿಜಯ್ ಕಾಂಗ್ರೆಸ್ ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಮ್ಯಾಜಿಕ್ ನಂಬರ್ 118 ತಲುಪಲು ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ 5 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ವಿಜಯ್‌ಗೆ ಬೆಂಬಲ ಘೋಷಿಸಿದೆ. ಇದು ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ದಶಕಗಳ ಸುದೀರ್ಘ ಸ್ನೇಹಕ್ಕೆ ಮುಕ್ತಿ ಹಾಡಿದೆ. ಡಿಎಂಕೆಯು ತನ್ನ ಸಿದ್ಧಾಂತಕ್ಕೆ ವಿರುದ್ಧವಾಗಿ ಎಐಎಡಿಎಂಕೆ ಜೊತೆ ಕೈಜೋಡಿಸುವ ಮೂಲಕ ಜಾತ್ಯತೀತತೆಗೆ ದ್ರೋಹ ಬಗೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ಮಾಣಿಕ್ಕಂ ಟ್ಯಾಗೋರ್ ಕಿಡಿಕಾರಿದ್ದಾರೆ.
ರಾಜ್ಯಪಾಲರ ಅಂಗಳದಲ್ಲಿ ಚೆಂಡು
ತಮಿಳುನಾಡು ರಾಜ್ಯಪಾಲ ಆರ್.ವಿ. ಅರ್ಲೇಕರ್ ಮತ್ತು ವಿಜಯ್ ನಡುವಿನ ಸಂಘರ್ಷ ಕೂಡ ತಾರಕಕ್ಕೇರಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ಆಹ್ವಾನ ನೀಡುವ ವಿಚಾರದಲ್ಲಿ ವಿಳಂಬವಾಗುತ್ತಿದೆ ಎಂದು ಟಿವಿಕೆ ಆರೋಪಿಸುತ್ತಿದೆ. ಒಂದು ವೇಳೆ ಡಿಎಂಕೆ ಮತ್ತು ಎಐಎಡಿಎಂಕೆ ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲು ಮುಂದಾದರೆ, ತನ್ನ ಪಕ್ಷದ ಎಲ್ಲಾ 107 ಶಾಸಕರು ರಾಜೀನಾಮೆ ನೀಡುವುದಾಗಿ ವಿಜಯ್ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆಯಾಗಿ, ಎಂಜಿಆರ್ ಕಾಲದಿಂದಲೂ ಹಾವು-ಏಣಿಯಾಟವಾಡುತ್ತಿದ್ದ ಎರಡು ಪ್ರಮುಖ ಪಕ್ಷಗಳು ಈಗ “ಸಾಮಾನ್ಯ ಶತ್ರು” ವಿಜಯ್ ವಿರುದ್ಧ ಒಂದಾಗುತ್ತಿರುವುದು ತಮಿಳುನಾಡು ಜನತೆಯಲ್ಲಿ ತೀವ್ರ ಕುತೂಹಲ ಮತ್ತು ಆಕ್ರೋಶ ಎರಡನ್ನೂ ಮೂಡಿಸಿದೆ. ಒಂದೆರಡು ದಿನದಲ್ಲೇ ತಮಿಳುನಾಡಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ : ಐಪಿಎಲ್ ಭದ್ರತಾ ಲೋಪ : ಅನಧಿಕೃತ ಪ್ರವೇಶಕ್ಕೆ ಬ್ರೇಕ್.. ಬಿಸಿಸಿಐನಿಂದ ಕಠಿಣ ಎಚ್ಚರಿಕೆ!



















