ಛತ್ರಪತಿ ಸಂಭಾಜಿನಗರ : ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಚೇರಿಯಲ್ಲಿ ನಡೆದಿದೆ ಎನ್ನಲಾದ ಬಲವಂತದ ಮತಾಂತರ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಕಳೆದ ಹಲವು ವಾರಗಳಿಂದ ತಲೆಮರೆಸಿಕೊಂಡಿದ್ದ ಈಕೆಯನ್ನು ಹಿಡಿಯಲು ಮಹಾರಾಷ್ಟ್ರ ಪೊಲೀಸರು ಅತ್ಯಂತ ಚಾಣಾಕ್ಷ ತಂತ್ರ ರೂಪಿಸಿದ್ದರು. ಸ್ಥಳೀಯರಿಗೆ ಸುಳಿವು ಸಿಗದಂತೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಿದಾ ಖಾನ್ ಅವರ ಬಂಧನವಾಗಿದೆ.
ವೇಷ ಮರೆಸಿ ಹೊಂಚು ಹಾಕಿದ ಪೊಲೀಸರು
ನಿದಾ ಖಾನ್ ಅವರನ್ನು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಅವರು ಛತ್ರಪತಿ ಸಂಭಾಜಿನಗರದ ನರೇಗಾಂ ಪ್ರದೇಶದ ಕೈಸರ್ ಕಾಲೋನಿಯ ಬಾಡಿಗೆ ಮನೆಯೊಂದರಲ್ಲಿ ಅವಿತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.ಆದರೆ, ಆರೋಪಿ ಎಚ್ಚೆತ್ತುಕೊಂಡು ಪರಾರಿಯಾಗಬಾರದೆಂಬ ಕಾರಣಕ್ಕೆ ಪೊಲೀಸರು ತಮ್ಮ ಸಮವಸ್ತ್ರ ಮತ್ತು ಅಧಿಕೃತ ವಾಹನಗಳನ್ನು ತ್ಯಜಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಸುಮಾರು 20ಕ್ಕೂ ಹೆಚ್ಚು ಸಿಬ್ಬಂದಿ ಸಾಮಾನ್ಯ ಉಡುಪಿನಲ್ಲಿ ಆ ಮನೆಯ ಸುತ್ತಮುತ್ತ ಸತತ ಮೂರ್ನಾಲ್ಕು ದಿನಗಳ ಕಾಲ ನಿಗಾ ವಹಿಸಿದ್ದರು. ತಾಂತ್ರಿಕ ವಿಶ್ಲೇಷಣೆ ಮತ್ತು ಲೊಕೇಶನ್ ಟ್ರ್ಯಾಕಿಂಗ್ ಮೂಲಕ ನಿಖರತೆಯನ್ನು ಖಚಿತಪಡಿಸಿಕೊಂಡ ನಂತರವೇ ದಾಳಿ ನಡೆಸಲಾಯಿತು.
ಹೈಕೋರ್ಟ್ ಮೆಟ್ಟಿಲೇರುವ ಮೊದಲೇ ಬಂಧನ
ಬಂಧಿತ ನಿದಾ ಖಾನ್ ತನ್ನ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿದ್ದರು. ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಅವರು ಛತ್ರಪತಿ ಸಂಭಾಜಿನಗರದ ವಕೀಲರ ಸಂಪರ್ಕದಲ್ಲಿದ್ದು, ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ತಯಾರಿ ನಡೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಅವರು ನ್ಯಾಯಾಲಯದ ಮೊರೆ ಹೋಗುವ ಮೊದಲೇ ಪೊಲೀಸರು ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಬಂಧನದ ನಂತರ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನಾಸಿಕ್ ಪೊಲೀಸರು ಹೆಚ್ಚಿನ ತನಿಖೆಗಾಗಿ ಟ್ರಾನ್ಸಿಟ್ ರಿಮಾಂಡ್ ಪಡೆದು ಕರೆದೊಯ್ದಿದ್ದಾರೆ.
ಏನಿದು ಟಿಸಿಎಸ್ ಮತಾಂತರ ಪ್ರಕರಣ?
2021ರಿಂದ ಟಿಸಿಎಸ್ ಸಂಸ್ಥೆಯಲ್ಲಿ ‘ಪ್ರೊಸೆಸ್ ಅಸೋಸಿಯೇಟ್’ ಆಗಿ ಕೆಲಸ ಮಾಡುತ್ತಿದ್ದ ನಿದಾ ಖಾನ್, ತನ್ನ ಸಹೋದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಬಲವಂತದ ಧಾರ್ಮಿಕ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದರು ಎಂಬ ಗಂಭೀರ ಆರೋಪವಿದೆ. ಸಂತ್ರಸ್ತರಿಗೆ ಇಸ್ಲಾಮಿಕ್ ಧಾರ್ಮಿಕ ಪುಸ್ತಕಗಳು ಮತ್ತು ವಿಡಿಯೋಗಳನ್ನು ಕಳುಹಿಸುವ ಮೂಲಕ ಅವರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ನಿದಾ ಖಾನ್ ಸೇರಿ ಇದುವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಈ ಹಿಂದೆ ತಾನು ಗರ್ಭಿಣಿ ಎಂದು ಹೇಳಿ ಬಂಧನದಿಂದ ವಿನಾಯಿತಿ ಪಡೆಯಲು ನಿದಾ ಯತ್ನಿಸಿದ್ದರು, ಆದರೆ ನ್ಯಾಯಾಲಯ ಆ ಮನವಿಯನ್ನು ತಿರಸ್ಕರಿಸಿತ್ತು. ಸದ್ಯ ನಾಸಿಕ್ ಪೊಲೀಸರು ಈ ಜಾಲದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಮತ್ತು ಇದು ವ್ಯವಸ್ಥಿತವಾಗಿ ನಡೆಯುತ್ತಿದ್ದ ಕೃತ್ಯವೇ ಎಂಬ ಬಗ್ಗೆ ಆಳವಾದ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ತಮಿಳುನಾಡಲ್ಲಿ ವಿಜಯ್ ಪಟ್ಟಾಭಿಷೇಕ ತಡೆಯಲು ದಶಕಗಳ ವೈರಿಗಳಾದ DMK-AIADMK ಒಂದಾಗುತ್ತಿವೆಯೇ?



















