ಶಿವಮೊಗ್ಗ : ಭದ್ರಾವತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 30 ವರ್ಷದ ವ್ಯಕ್ತಿಗೆ FTSC-1 ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
2022ರಲ್ಲಿ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಭದ್ರಾವತಿಯ ವೃತ್ತ ನಿರೀಕ್ಷಕರಾದ ರಾಘವೇಂದ್ರ ಕಾಂಡಿಕೆ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿತನ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ನಿಂಗನಗೌಡ ಪಾಟೀಲ್ ಅವರು ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 65 ಸಾವಿರ ರೂ. ದಂಡವನ್ನು ವಿಧಿಸಿದೆ. ಅಲ್ಲದೆ ನೊಂದ ಬಾಲಕಿಗೆ ಸರ್ಕಾರವು 4.50 ಲಕ್ಷ ರೂ. ನೀಡುವಂತೆ ಅದೇಶಿಸಿದ್ದಾರೆ. ಸರ್ಕಾರದ ಪರವಾಗಿ ಶ್ರೀಧರ್ ಅವರು ವಾದ ಮಂಡಿಸಿದ್ದರು.
ಬಾಲಕಿಯನ್ನು ಪುಸಲಾಯಿಸಿ ಮದುವೆಯಾಗಿದ್ದಲ್ಲದೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಅಪರಾಧಿ ಜಾತ್ರೆಯ ಸಮಯದಲ್ಲಿ ಮಕ್ಕಳ ಆಟದ ಸಾಮಾನುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ. ಈ ಸಂದರ್ಭ ಪಿಯುಸಿ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದನು. ಆರೋಪಿಗೆ ಮೊದಲೊಂದು ಮದುವೆಯಾಗಿದೆ. ಆದರೂ ಬಾಲಕಿಯನ್ನು ಮದುವೆಯಾಗುವುದಾಗಿ 2022ರ ಮಾರ್ಚ್ 22ರಂದು ನಿಮ್ಮ ತಾಯಿ ಕರೆಯುತ್ತಿದ್ದಾರೆ ಎಂದು ಪುಸಲಾಯಿಸಿ ಹಲಗನಹಳ್ಳಿಯಿಂದ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿದ್ದನು.
ಪ್ರಕರಣದ ವಿಚಾರಣೆ ನಡೆಸಿದ ನಗರದ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆನಂದ್ ಪಿ.ಹೊಗಾಡೆ ಅವರು ಆರೋಪಿತನ ವಿರುದ್ಧದ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಕೆ.ಬಿ. ಜಯಂತಿ ವಾದ ಮಂಡಿಸಿದ್ದರು.
ಇದನ್ನೂ ಓದಿ : ಆಫ್ ಸೆಂಚುರಿ ಬಾರಿಸಿದ ಕಾಂತಾರ ಚಾಪ್ಟರ್-1 ; ಖುಷಿ ಹಂಚಿಕೊಂಡ ಹೊಂಬಾಳೆ



















