ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮಧ್ಯಾಹ್ನ 12 ಗಂಟೆಗೆ ಹಾಟ್ ಲೈನ್ ಮೂಲಕ ಸಭೆ ನಡೆಸಲಿದ್ದಾರೆ.
ಈ ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮೂರೂ ಸೇನೆಗಳ ಮುಖ್ಯಸ್ಥರು ಹಾಗೂ ರಕ್ಷಣಾ ಪಡೆಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸುದೀರ್ಘ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಕೂಡ ಭಾಗಿಯಾಗಿದ್ದರು. ಈ ರಹಸ್ಯ ಸಭೆಯ ವಿವರಗಳು ಬಹಿರಂಗವಾಗಿಲ್ಲ.
ಆದರೆ, ಎರಡೂ ದೇಶಗಳ ಡಿಜಿಎಂಒ ಮಟ್ಟದ ಸಭೆಯಲ್ಲಿ ಪಾಪಿ ಪಾಕಿಸ್ತಾನದ ಮುಂದೆ ಏನೆಲ್ಲ ವಿಚಾರಗಳನ್ನು ಪ್ರಸ್ತಾಪಿಸಬೇಕು, ಭಾರತವು ಯಾವ ಷರತ್ತುಗಳನ್ನು ಹಾಕಬೇಕು, ಮುಂದಿನ ನಡೆ ಏನು ಮುಂತಾದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆದಿರಬಹುದಾದ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಭಾರತವು ಈ ಬಾರಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಬಿಟ್ಟು ಕೊಡುವಂತೆ ಪಾಕ್ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ. ಅಲ್ಲದೇ, ಪಿಒಕೆ ಮತ್ತು ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವುದು, ಭಯೋತ್ಪಾದಕರಿಗೆ ಹಣಕಾಸು ನೆರವು ಸಂಪೂರ್ಣ ಸ್ಥಗಿತಗೊಳಿಸುವುದು, ಮುಂದೆ ಯಾವತ್ತೂ ಭಾರತದ ತಂಟೆಗೆ ಬಾರದೇ ಇರುವುದು ಸೇರಿದಂತೆ ಹಲವು ಷರತ್ತುಗಳನ್ನು ಪಾಕಿಸ್ತಾನದ ಮುಂದಿಡುವ ಬಗ್ಗೆ ಭಾರತ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಸರ್ಕಾರದಿಂದಾಗಲೀ, ಸೇನೆಯಿಂದಾಗಲೀ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಇಂದಿನ ಸಭೆ ಕುತೂಹಲ ಮೂಡಿಸಿದೆ.



















