ಕಪುರ್ತಲಾ: ಪ್ರೀತಿಯ ಮಗ ಸಾವನ್ನಪ್ಪಿದ್ದಾನೆ ಎಂದು ಕಣ್ಣೀರು ಹಾಕುತ್ತಲೇ ಆತನ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬವೊಂದು, ಆತ ಬದುಕಿರುವ ಸುದ್ದಿ ಕೇಳಿ ಅಚ್ಚರಿ ಹಾಗೂ ಆನಂದದ ಕಡಲಿನಲ್ಲಿ ತೇಲಿದ ಘಟನೆ ಪಂಜಾಬ್ನ ಕಪುರ್ತಲಾದಲ್ಲಿ ನಡೆದಿದೆ. ಸತ್ತಿದ್ದಾನೆ ಎಂದು ಭಾವಿಸಿ ಶವಸಂಸ್ಕಾರ ಮಾಡಿದ ಬರೋಬ್ಬರಿ 15 ದಿನಗಳ ಬಳಿಕ, ಆ ಯುವಕ ಜೈಲಿನಲ್ಲಿ ಜೀವಂತವಾಗಿರುವ ವಿಚಾರ ಗೊತ್ತಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಆಗಿದ್ದೇನು?
ಕಪುರ್ತಲಾ ನಿವಾಸಿ ರವಿ ಕುಮಾರ್ ಆಗಸ್ಟ್ 5ರಂದು ಮನೆಯಿಂದ ಹೊರಹೋದವನು ವಾಪಸ್ ಬಂದಿರಲಿಲ್ಲ. ಆತನ ತಂದೆ ಮತ್ತು ಸಹೋದರ ಎಲ್ಲೆಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಗದಿದ್ದಾಗ, ಆಗಸ್ಟ್ 11ರಂದು ಕಪುರ್ತಲಾ ಸಿಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಇದೇ ಸಂದರ್ಭದಲ್ಲಿ ಪೊಲೀಸರಿಗೆ ಸುಟ್ಟು ಕರಕಲಾಗಿದ್ದ ಅಪರಿಚಿತ ಯುವಕನ ಶವವೊಂದು ಪತ್ತೆಯಾಗಿತ್ತು. ಪೊಲೀಸರು ಆ ಶವದ ಛಾಯಾಚಿತ್ರಗಳನ್ನು ರವಿ ಕುಟುಂಬದವರಿಗೆ ತೋರಿಸಿದಾಗ, ಅದು ತಮ್ಮ ಮಗನೇ ಎಂದು ಕುಟುಂಬಸ್ಥರು ಹಾಗೂ ಇತರರು ತಪ್ಪಾಗಿ ಗುರುತಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಂತ್ಯಕ್ರಿಯೆ ಬಳಿಕ ಬಂತು ಅಚ್ಚರಿಯ ಕರೆ
ತಮ್ಮ ಮಗ ಇನ್ನು ನೆನಪು ಮಾತ್ರ ಎಂದು ಭಾವಿಸಿದ ಕುಟುಂಬಸ್ಥರು ತೀವ್ರ ದುಃಖದ ನಡುವೆ ಆಗಸ್ಟ್ 13ರಂದು ಆ ಸುಟ್ಟ ಶವದ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದರು. ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಆದರೆ, ಸೆಪ್ಟೆಂಬರ್ 2ರಂದು ಕಪುರ್ತಲಾ ಕೇಂದ್ರ ಕಾರಾಗೃಹದ ಸಿಬ್ಬಂದಿಯೊಬ್ಬರು ಕರೆ ಮಾಡಿ, ‘ರವಿ ಕುಮಾರ್ ಎಂಬಾತ ನಮ್ಮ ಜೈಲಿನಲ್ಲಿದ್ದಾನೆ’ ಎಂಬ ಮಾಹಿತಿಯನ್ನು ನೀಡಿದಾಗ ಕುಟುಂಬಸ್ಥರು ಅಕ್ಷರಶಃ ಆಘಾತಕ್ಕೊಳಗಾದರು.
ಅಷ್ಟಕ್ಕೂ ಆಗಿದ್ದೇನು? ಜೈಲು ಸೇರಿದ್ದು ಹೇಗೆ?
ಸುಮಾರು ಒಂದು ತಿಂಗಳ ಹಿಂದೆಯೇ ಜಲಂಧರ್ ಪೊಲೀಸರು ಅಲೆಮಾರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರವಿ ಕುಮಾರ್ನನ್ನು ಬಂಧಿಸಿ ಕಪುರ್ತಲಾ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದರು. ಈ ವಿಚಾರ ತಿಳಿಯದ ಕುಟುಂಬಸ್ಥರು ಮತ್ತಾರದ್ದೋ ಶವವನ್ನು ತಮ್ಮ ಮಗನೆಂದು ಭಾವಿಸಿ ದಹಿಸಿದ್ದರು. ಜೈಲಿನಿಂದ ಬಂದ ಕರೆಯಿಂದ ಗೊಂದಲಕ್ಕೊಳಗಾದ ಕುಟುಂಬಸ್ಥರು ಮರುದಿನವೇ ಕಾರಾಗೃಹಕ್ಕೆ ದೌಡಾಯಿಸಿದ್ದಾರೆ. ಅಲ್ಲಿ ತಮ್ಮ ಮಗ ರವಿ ಕುಮಾರ್ನನ್ನು ಜೀವಂತವಾಗಿ ಕಂಡು ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸದ್ಯ ರವಿ ಕುಮಾರ್ ಬದುಕಿ ಬಂದಿರುವುದು ಕುಟುಂಬಕ್ಕೆ ನೆಮ್ಮದಿ ತಂದಿದೆ. ಆದರೆ ಅವರು ಅಂತ್ಯಕ್ರಿಯೆ ಮಾಡಿದ ಆ ಶವ ಯಾರದ್ದು ಎಂಬ ಪ್ರಶ್ನೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.



















