ಬೆಂಗಳೂರು : ಚಿಕ್ಕಬಾಣವಾರದಲ್ಲಿ ನಡೆದಿದ್ದ ತಂದೆ-ಮಗನ ಅನುಮಾನಾಸ್ಪದ ಸಾವಿನ ಪ್ರಕರಣ ಇದೀಗ ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪತ್ನಿ ಹರಿಣಿಯೇ ತನ್ನ ಗಂಡ ಅಭಿನಂದನ್ ಹಾಗೂ ಮಗ ಯದುವೀರ್‌ನನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಚಿಕ್ಕಬಾಣವಾರ ಪೊಲೀಸರು ಹರಿಣಿಯನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಹರಿಣಿ ಒಪ್ಪಿಕೊಂಡಿದ್ದು, ಪ್ರಕರಣದ ಅಸಲಿ ಕಹಾನಿಯನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.
ಹರಿಣಿ ತನ್ನ ಪ್ರಿಯಕರ ವಿನಯ್‌ನೊಂದಿಗೆ ಸೇರಿ ಗಂಡ ಹಾಗೂ ಮಗನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು. ರಾತ್ರಿ 11 ಗಂಟೆ ಸುಮಾರಿಗೆ ವಿನಯ್‌ನನ್ನು ಮನೆಗೆ ಕರೆಸಿಕೊಂಡಿದ್ದ ಹರಿಣಿ, ಕೃತ್ಯಕ್ಕೆ ಮುನ್ನ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಆಫ್ ಮಾಡಿದ್ದಳು. ಬಳಿಕ ಗಂಡ ಅಭಿನಂದನ್ ಅವರ ತಲೆಗೆ ಸೌಟ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಈ ವೇಳೆ ನಡೆದ ಕೃತ್ಯವನ್ನು ಮಗ ಯದುವೀರ್ ನೋಡಿದ್ದ ಎಂದು ಹರಿಣಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾಳೆ.
ಮಗ ಯದುವೀರ್‌ಗೆ ಮುಂದೆ ತಮಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಆತನನ್ನೂ ಕೊಲೆ ಮಾಡಲು ಹರಿಣಿ ಹಾಗೂ ವಿನಯ್ ನಿರ್ಧರಿಸಿದ್ದರು. ಬಳಿಕ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಅದನ್ನು ಬೇರೆ ರೀತಿಯಲ್ಲಿ ಬಿಂಬಿಸಲು ಯತ್ನಿಸಿದ್ದಾರೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಿದ್ದಿದೆ. ಕೃತ್ಯದ ಬಳಿಕ ಮನೆಯಲ್ಲಿ ಬಿದ್ದಿದ್ದ ರಕ್ತದ ಕಲೆಗಳನ್ನು ಹರಿಣಿ ಸ್ವಚ್ಛಗೊಳಿಸಿದ್ದಾಳೆ.
ಅಭಿನಂದನ್ ಅವರ ರಕ್ತದ ಕಲೆಗಳು ಬಟ್ಟೆಯ ಮೇಲೆ ಕಂಡುಬಂದ ಹಿನ್ನೆಲೆಯಲ್ಲಿ ಬಟ್ಟೆ ಬದಲಿಸಿಕೊಂಡ ಹರಿಣಿ, ಆ ಬಟ್ಟೆಗಳನ್ನು ರಾತ್ರೋರಾತ್ರಿ ಒಗೆದುಹಾಕಿದ್ದಳು. ನಂತರ ಮಗುವಿನ ಮೇಲೆ ಮಲಗಿಸಿ ಉಸಿರುಗಟ್ಟಿಸಿ ಸಾವನ್ನಪ್ಪಿದಂತೆ ಬಿಂಬಿಸಲು ಯತ್ನಿಸಿದ್ದಳು ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಯೋಜನೆಯಂತೆ ಕೃತ್ಯ ಎಸಗಿದ ಬಳಿಕ ವಿನಯ್ ಅಲ್ಲಿಂದ ಪರಾರಿಯಾಗಿದ್ದಾನೆ.
ಸದ್ಯ ಚಿಕ್ಕಬಾಣವಾರ ಪೊಲೀಸರು ಹರಿಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಹರಿಣಿಯ ಪ್ರಿಯಕರ ವಿನಯ್‌ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದ್ದು, ಪೊಲೀಸರ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ SIR ಪ್ರಕ್ರಿಯೆ ಮುಕ್ತಾಯ : ಬೆಂಗಳೂರಿನಲ್ಲಿ ಹೆಚ್ಚಿದ ASDDO ಪ್ರಮಾಣ!


















