ರೇವಾ (ಮಧ್ಯಪ್ರದೇಶ): ಒಬ್ಬಳೇ ಯುವತಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಆಪ್ತ ಗೆಳೆಯರಿಬ್ಬರ ನಡುವಿನ ತ್ರಿಕೋನ ಪ್ರೇಮ ಕಥೆ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಮಧ್ಯಪ್ರದೇಶದ ರೀವಾ ಜಿಲ್ಲೆಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಗೆಳೆಯನನ್ನೇ ಹತ್ಯೆಗೈದು ಆತನ ಮೃತದೇಹವನ್ನು ಚರಂಡಿಗೆ ಎಸೆದಿದ್ದ ಆಶೀಶ್ ಕೋಲ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತನನ್ನು 30 ವರ್ಷದ ಮೊಹಮ್ಮದ್ ಇಸ್ರಾರ್ ಎಂದು ಗುರುತಿಸಲಾಗಿದೆ. ಆಶೀಶ್ ಮತ್ತು ಇಸ್ರಾರ್ ಇಬ್ಬರೂ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ಇದು ಪರಸ್ಪರರಿಗೆ ತಿಳಿದ ಬಳಿಕ ಇಬ್ಬರ ನಡುವೆ ಸದಾ ಗಲಾಟೆ ನಡೆಯುತ್ತಿತ್ತು. ಆಗಸ್ಟ್ 26ರಂದು ಇಸ್ರಾರ್ ದಿಢೀರ್ ನಾಪತ್ತೆಯಾಗಿದ್ದ. ತನಿಖೆ ನಡೆಸಿದಾಗ ಆತ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಆಶೀಶ್, ಇಸ್ರಾರ್ನನ್ನು ಜೊತೆಯಲ್ಲಿ ಕರೆದೊಯ್ದು ಮದ್ಯ ಕುಡಿಸಿದ್ದ. ಬಳಿಕ ಇಬ್ಬರ ನಡುವೆ ಪ್ರೇಯಸಿಯ ವಿಚಾರವಾಗಿ ಮಾತಿಗೆ ಮಾತು ಬೆಳೆದು, ತೀಕ್ಷ್ಣವಾದ ಆಯುಧದಿಂದ ಇಸ್ರಾರ್ ಕುತ್ತಿಗೆ ಹಾಗೂ ಮೈಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.
ಚರಂಡಿಯಲ್ಲಿ ಪತ್ತೆಯಾಯ್ತು ರಕ್ತಸಿಕ್ತ ಶವ
ಹತ್ಯೆಯ ನಂತರ ಆಶೀಶ್, ಇಸ್ರಾರ್ ಮೃತದೇಹವನ್ನು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಹತ್ತಿರದ ಚರಂಡಿಗೆ ಎಸೆದು ಪರಾರಿಯಾಗಿದ್ದ. ಆಗಸ್ಟ್ 28ರಂದು ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಇದರಿಂದ ಆಕ್ರೋಶಗೊಂಡ ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ರಸ್ತೆ ತಡೆ ನಡೆಸಿ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಭಾರಿ ಪ್ರತಿಭಟನೆ ನಡೆಸಿದ್ದರು.
ಸಿಡಿಆರ್, ಮೊಬೈಲ್ ತನಿಖೆಯಿಂದ ಬಯಲಾಯ್ತು ರಹಸ್ಯ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮೃತನ ಮೊಬೈಲ್ ಫೋನ್ ಕರೆಗಳ ವಿವರ (CDR) ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಕೂಲಂಕಶವಾಗಿ ಪರಿಶೀಲಿಸಿದ್ದರು. ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (ASP) ಭಾವನಾ ಮರಾವಿ ಅವರ ನೇತೃತ್ವದ ತಂಡ ತಾಂತ್ರಿಕ ಸಾಕ್ಷ್ಯಾಧಾರಗಳ ಬೆನ್ನತ್ತಿದಾಗ, ಹತ್ಯೆಯ ಹಿಂದಿನ ಅಸಲಿ ಸೂತ್ರಧಾರ ಆಶೀಶ್ ಕೋಲ್ ಎಂಬುದು ಬಯಲಾಗಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.



















