ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ವಾಯುದಾಳಿಗೆ ಪಾಕಿಸ್ತಾನ ತತ್ತರಿಸಿಹೋಗಿದೆ. ಭಾರತದ ವಾಯುದಾಳಿಗೆ ಪಾಕಿಸ್ತಾನದ ಎಫ್-16 ಸೇರಿ 31 ಸಾವಿರ ಕೋಟಿ ರೂಪಾಯಿ ಮೌಲ್ಯದ ಯುದ್ಧವಿಮಾನ, ಕ್ಷಿಪಣಿಗಳನ್ನು ಕಳೆದುಕೊಂಡಿದೆ. ಇಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನವೀಗ ಭಾರತದ ವಿರುದ್ಧ “ಗೂಢಚಾರ ಸಮರ” ಸಾರಿದೆ. ಹಾಗಾಗಿ, ಉಗ್ರ ನಿಗ್ರಹ ಪಡೆಗಳು ಹೈ ಅಲರ್ಟ್ ಆಗಿವೆ.
ಹೌದು, ಭಾರತದಲ್ಲಿರುವ ಮೂಲಭೂತವಾದಿಗಳನ್ನು ಬಳಸಿಕೊಂಡು ಭಾರತದ ವಿರುದ್ಧವೇ ಪಾಕಿಸ್ತಾನ ಪಿತೂರಿ ನಡೆಸುತ್ತಿದೆ. ಕಳೆದ ಬುಧವಾರವಷ್ಟೇ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮೊಹಮ್ಮದ್ ತುಫೈಲ್ ಎಂಬಾತನನ್ನು ಉಗ್ರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಬಂಧಿಸಿದೆ. ಈತನನ್ನು ವಿಚಾರಣೆ ನಡೆಸಿದ ಬಳಿಕ ಸಂಚಿನ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಭಾರತಕ್ಕೆ ಸಂಬಂಧಿಸಿದ ಮಾಹಿತಿ ಸೋರಿಕೆ, ಗೂಢಚಾರಿಕೆ ಆರೋಪದಲ್ಲಿ ಎಟಿಎಸ್ ಅಧಿಕಾರಿಗಳು ಮೊಹಮ್ಮದ್ ತುಫೈಲ್ ನನ್ನು ಬಂಧಿಸಿದ್ದಾರೆ. ಈತನನ್ನು ವಿಚಾರಣೆ ನಡೆಸಿದಾಗ ಗೂಢಚಾರಕ್ಕೆ ಸಂಬಂಧಿಸಿದಂತೆ 500 ಮೊಬೈಲ್ ನಂಬರ್ ಗಳು ಹಾಗೂ ವಾಟ್ಸ್ ಆ್ಯಪ್ ನ 20 ಗ್ರೂಪ್ ಗಳಲ್ಲಿ ಷಡ್ಯಂತ್ರ ನಡೆದಿರುವುದು ಬಹಿರಂಗವಾಗಿದೆ. ಹಾಗಾಗಿ, ಎಟಿಎಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಹನಿಟ್ರ್ಯಾಪ್ ಷಡ್ಯಂತ್ರ
ಮೊಹಮ್ಮದ್ ತುಫೈಲ್ ಹನಿಟ್ರ್ಯಾಪ್ ಗೆ ಬಲಿಯಾಗಿ ಗೂಢಚಾರಿಕೆಯಲ್ಲಿ ತೊಡಗಿದ್ದಾನೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ನಫೀಸಾ ಎಂಬ ಮಹಿಳೆಯ ಜತೆ ಮೊಹಮ್ಮದ್ ಜಾಲತಾಣದ ಮೂಲಕ ಸಂಪರ್ಕ ಸಾಧಿಸಿದ್ದಾನೆ. ಇದಾದ ಬಳಿಕ ವಾಟ್ಸ್ ಆ್ಯಪ್ ನಲ್ಲಿ ಚಾಟ್ ಮಾಡಿದ್ದಾನೆ. ನಫೀಸಾ ಮೋಹದ ಜಾಲಕ್ಕೆ ಸಿಲುಕಿದ ಮೊಹಮ್ಮದ್, ಆಕೆಗೆ ಉಡುಗೊರೆಗಳನ್ನು ಕೂಡ ಕಳುಹಿಸಿದ್ದಾನೆ. ಇದಾದ ಬಳಿಕ ಆಕೆಯ ಸೂಚನೆಯಂತೆ ಗೂಢಚಾರಿಕೆಯಲ್ಲಿ ತೊಡಗಿದ್ದಾನೆ ಎಂದು ತಿಳಿದುಬಂದಿದೆ. ಪಾಕಿಸ್ತಾನ ಮೂಲದ ವಾಟ್ಸ್ ಆ್ಯಪ್ ಗ್ರೂಪ್ ನಲ್ಲೂ ಈತ ಸಕ್ರಿಯನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿಯೇ ಎಟಿಎಸ್ ಅಧಿಕಾರಿಗಳು ಉನ್ನತ ತನಿಖೆ ನಡೆಸುತ್ತಿದ್ದಾರೆ.



















