ಬೆಂಗಳೂರು : ಫಾಸ್ಟ್ಯಾಗ್ ಬಳಸುವ ವಾಹನಗಳ ಮಾಲೀಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು “ಒನ್ ಟ್ಯಾಗ್” ಎಂಬ ಹೊಸ ಸೇವೆಯನ್ನು ಆರಂಭಿಸಿದ್ದು, ಇದರಿಂದ ವಾಹನಗಳ ಮಾಲೀಕರಿಗೆ ಭಾರಿ ಅನುಕೂಲವಾಗಲಿದೆ. ಒನ್ ಟ್ಯಾಗ್ ಸೌಲಭ್ಯದ ಅನ್ವಯ ವಾಹನಗಳ ಮಾಲೀಕರು ಒಂದೇ ಫಾಸ್ಟ್ಯಾಗ್ ಸ್ಟಿಕ್ಕರ್ ಇಟ್ಟುಕೊಂಡು ಬೇರೆ ಬೇರೆ ಬ್ಯಾಂಕ್ ಗಳಿಗೆ ಬದಲಾಯಿಸಿಕೊಳ್ಳಬಹುದಾಗಿದೆ.
ಹೌದು, ಇನ್ನು ಮುಂದೆ ಫಾಸ್ಟ್ಯಾಗ್ ಬಳಕೆದಾರರು ತಮ್ಮ ಹಳೆಯ ಭೌತಿಕ ಸ್ಟಿಕ್ಕರ್ ಅನ್ನು ಬದಲಾಯಿಸದೆ ಅಥವಾ ಹೊಸ ಟ್ಯಾಗ್ ಅನ್ನು ಪಡೆಯದೆ, ತಮ್ಮ ವಾಹನದಲ್ಲಿರುವ ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ನೊಂದಿಗೆ ಬೇರೆ ಇಶ್ಯೂಯರ್ ಬ್ಯಾಂಕ್ ಗೆ ಬದಲಾಯಿಸಿಕೊಳ್ಳಬಹುದು. ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಮಾದರಿಯಲ್ಲೇ ಇದು ಕಾರ್ಯನಿರ್ವಹಿಸುತ್ತದೆ. ಇದಕ್ಕೂ ಮೊದಲು ಫಾಸ್ಟ್ಯಾಗ್ ಬ್ಯಾಂಕ್ ಬದಲಾಯಿಸಬೇಕಾದರೆ ಹಳೆಯ ಖಾತೆಯನ್ನು ರದ್ದುಗೊಳಿಸಿ, ಹೊಸ ಟ್ಯಾಗ್ ಖರೀದಿಸಿ, ವಾಹನದ ಮೇಲಿದ್ದ ಹಳೆಯ ಸ್ಟಿಕ್ಕರ್ ತೆಗೆದು ಹೊಸದನ್ನು ಅಂಟಿಸಬೇಕಿತ್ತು. ಈಗ ಒನ್‌ಟ್ಯಾಗ್‌ನಿಂದ ಈ ಕಿರಿಕಿರಿ ತಪ್ಪಲಿದೆ.
ಒನ್ ಟ್ಯಾಗ್ ಎಲ್ಲಿ ಲಭ್ಯವಿರುತ್ತದೆ?
ಈ ಸೇವೆಯು ಎನ್ ಎಚ್ ಎ ಐನ ‘ರಾಜಮಾರ್ಗಯಾತ್ರಾ’ ಮೊಬೈಲ್ ಅಪ್ಲಿಕೇಶನ್ ನಲ್ಲಿ ಲಭ್ಯವಿರುತ್ತದೆ. ಆ್ಯಪ್ ಮೂಲಕ ಬಳಕೆದಾರರು ತಮ್ಮ ಅರ್ಹತೆಯನ್ನು ಪರಿಶೀಲಿಸಿ, ವೇರಿಫಿಕೇಷನ್ ಮುಗಿಸಿ, ತಮ್ಮ ಇಚ್ಛೆಯ ಹೊಸ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಬ್ಯಾಂಕ್ ಬದಲಾದ ನಂತರವೂ ವಾಹನದ ನೋಂದಣಿ ಸಂಖ್ಯೆ ಮತ್ತು ಟ್ಯಾಗ್ ಐಡಿ ಹಾಗೆಯೇ ಇರುತ್ತದೆ.
ಪೋರ್ಟೆಬಿಲಿಟಿ ಪ್ರಕ್ರಿಯೆಯಲ್ಲಿ ಹಳೆಯ ಬ್ಯಾಂಕ್ ಬಾಕಿ ಹಣ ಮರುಪಾವತಿ ಮತ್ತು ವಹಿವಾಟುಗಳನ್ನು ನಿರ್ವಹಿಸಿದರೆ, ಹೊಸ ಬ್ಯಾಂಕ್ ಮುಂದಿನ ಸೇವೆಗಳನ್ನು ನೋಡಿಕೊಳ್ಳುತ್ತದೆ. ಈ ಉಪಕ್ರಮವು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದಲ್ಲದೆ, ಡಿಜಿಟಲ್ ಟೋಲಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲಿದೆ.
ಇದನ್ನೂ ಓದಿ ; ಬೆಂಗಳೂರಿನ InStem ಸಂಸ್ಥೆಯಲ್ಲಿ ನೇಮಕಾತಿ: ಬಿ.ಇ, ಬಿ.ಟೆಕ್ ಮುಗಿಸಿದವರಿಗೆ ಅವಕಾಶ



















