ಕಂಪಾಲ (ಉಗಾಂಡ):ಕಳೆದ 15 ವರ್ಷಗಳಲ್ಲಿ ಸುಮಾರು 38 ಜನರನ್ನು ಭೀಕರವಾಗಿ ಕೊಲೆ ಮಾಡಿ, ಅವರ ಮಾಂಸವನ್ನು ತಾನೇ ತಿಂದಿದ್ದ ಉಗಾಂಡ ಇತಿಹಾಸದ ಅತ್ಯಂತ ಕ್ರೂರ ಸರಣಿ ಹಂತಕ ಹಾಗೂ ನರಭಕ್ಷಕ ಮುಜುರಿಜಿ ಮೋಸಸ್ ಎಂಬಾತನನ್ನು ದೇಶದ ಭದ್ರತಾ ಪಡೆಗಳು ಬಂಧಿಸಿವೆ. ಈ ವಿಚಾರವನ್ನು ಉಗಾಂಡ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಮುಹೂಜಿ ಕೈನೇರುಗಾಬಾ ಅವರು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿಅಧಿಕೃತವಾಗಿಬಹಿರಂಗಪಡಿಸಿದ್ದಾರೆ.
15 ವರ್ಷಗಳ ರಕ್ತಸಿಕ್ತ ಅಧ್ಯಾಯ
ಆರೋಪಿ ಮುಜುರಿಜಿ ಮೋಸಸ್ 2010ರಿಂದ 2025 ರ ಅವಧಿಯಲ್ಲಿ ಮಸಾಕಾ, ಇಬಾಂಡಾ ಮತ್ತು ಕಾಜೋ ಜಿಲ್ಲೆಗಳಲ್ಲಿ ಈ ಭಯಾನಕ ಕೃತ್ಯಗಳನ್ನು ಎಸಗಿದ್ದಾನೆ. ಈತ ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಇಡೀ ಕುಟುಂಬಗಳ ಮೇಲೆಯೇ ಲಾಂಗ್ ಹಾಗೂ ಮಚ್ಚುಗಳಿಂದ ಭೀಕರವಾಗಿ ದಾಳಿ ನಡೆಸುತ್ತಿದ್ದ. ಕೆಲವು ಸಂದರ್ಭಗಳಲ್ಲಿ ಪ್ರೀತಿಯ ಬಲೆಗೆ ಬೀಳಿಸಿ ಜನರನ್ನು ಕರೆಸಿಕೊಂಡು ಹತ್ಯೆ ಮಾಡುತ್ತಿದ್ದ. ಪೆಂಟೆಕೋಸ್ಟಲ್ ಪಾದ್ರಿ ಸ್ಟೀವನ್ ಮುಗಾಂಬೆ ಅವರ ಮನೆಗೆ ಕನ್ನ ಹಾಕಿ, ಅಲ್ಲಿದ್ದ ಎಲ್ಲರನ್ನೂ ಕೊಚ್ಚಿ ಕೊಂದಿದ್ದ ಘಟನೆ ಈತನ ಅತ್ಯಂತ ಪೈಶಾಚಿಕ ಕೃತ್ಯಗಳಲ್ಲಿ ಒಂದಾಗಿದೆ. ಈ ಹಿಂದೆ ಹಲವು ಬಾರಿ ಸಿಕ್ಕಿಬಿದ್ದಿದ್ದರೂ ಈತ ತನಿಖೆಯಿಂದ ತಪ್ಪಿಸಿಕೊಂಡು ಓಡಿಹೋಗಿದ್ದ.
ಮರಣದಂಡನೆಯ ಎಚ್ಚರಿಕೆ
ಬಂಧನದ ಬಳಿಕ ಆರೋಪಿಯ ನಿವಾಸದಿಂದ ಹಲವು ಪ್ರಮುಖ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರದೇಶದಲ್ಲಿ ಹಿಂದೆ ನಡೆದ ಅನೇಕ ಅಪರಿಚಿತ ನಾಪತ್ತೆ ಪ್ರಕರಣಗಳು ಮತ್ತು ಕೊಲೆಗಳಿಗೂ ಈತನೇ ಕಾರಣನೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಸೇನಾ ಮುಖ್ಯಸ್ಥ ಜನರಲ್ ಮುಹೂಜಿ, “ಉಗಾಂಡ ಇತಿಹಾಸದಲ್ಲೇ ಅತ್ಯಂತ ಕ್ರೂರ ಸರಣಿ ಹಂತಕ ಹಾಗೂ ನರಭಕ್ಷಕ ಮೋಸಸ್ನನ್ನು ಬಂಧಿಸಲು ನಮ್ಮ ಪಡೆಗಳು ಯಶಸ್ವಿಯಾಗಿವೆ. ಆತನನ್ನು ಸಾರ್ವಜನಿಕವಾಗಿ ವಿಚಾರಣೆಗೆ ಒಳಪಡಿಸಿ, ಖಂಡಿತವಾಗಿಯೂ ಮರಣದಂಡನೆ ವಿಧಿಸಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.



















