ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ 34 ವರ್ಷದ ಯುವತಿಯೊಬ್ಬಳ ಮೃತದೇಹ ಆಡುಗೋಡಿ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಅರೆಕೊಳೆತ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಯುವತಿಯನ್ನು ಪೂಜಾ ದತ್ತಾ (34) ಎಂದು ಗುರುತಿಸಲಾಗಿದೆ. ಪೂಜಾ ಅವರು ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿಯಾಗಿದ್ದರು. ಎರಡು ಮೂರು ದಿನಗಳ ಹಿಂದೆಯೇ ಪೂಜಾ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಮೃತದೇಹ ಸಂಪೂರ್ಣವಾಗಿ ಕೊಳೆಯಲು ಶುರುವಾಗಿದ್ದು, ಅಕ್ಕಪಕ್ಕದ ರೂಮಿನವರಿಗೆ ಭೀಕರ ವಾಸನೆ ಬಂದಿದ್ದರಿಂದ ಅನುಮಾನಗೊಂಡು ಬಾಗಿಲು ತೆರೆದು ನೋಡಿದಾಗ ಪೂಜಾ ಮೃತದೇಹ ಕಂಡುಬಂದಿದೆ. ಬಳಿಕ ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪೂಜಾ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಐಡಿ ಕಾರ್ಡ್ ಮನೆಯಲ್ಲಿ ಪತ್ತೆಯಾಗಿದೆ. ಇನ್ನು, ಬೆತ್ತಲೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಮತ್ತು ಮೃತದೇಹ ಕೊಳೆತ ಸ್ಥಿತಿಯಲ್ಲಿರುವುದು ಸಾವಿನ ಕುರಿತು ಭಾರಿ ಅನುಮಾನಗಳನ್ನು ಮೂಡಿಸಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೂಜಾ ಅವರ ಫೋನ್ ಕರೆಗಳು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಬಾಡಿಗೆ ಮನೆ ಮಾಲಕಿ ಬಿಚ್ಚಿಟ್ಟ ಸ್ಫೋಟಕ ಸತ್ಯ!
“ಪೂಜಾ ದತ್ತಾ ಕಳೆದ ಮೂರು ವರ್ಷಗಳಿಂದ ನನ್ನ ಮನೆಯಲ್ಲಿ ಬಾಡಿಗೆಗೆ ಇದ್ದಳು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ ಅವಿವಾಹಿತೆಯಾಗಿದ್ದಳು. ಹೆಚ್ಚಾಗಿ ಹಿಂದಿ ಭಾಷೆಯಲ್ಲೇ ಮಾತನಾಡುತ್ತಿದ್ದಳು, ಪೂಜಾಳನ್ನು ನೋಡಲು ಓರ್ವ ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆತನೊಂದಿಗೆ ಪೂಜಾ ಸದಾ ಜಗಳವಾಡುತ್ತಿದ್ದಳು. ಆದರೆ ಆ ಜಗಳಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ ಎಂದು ಮಾಲಕಿ ಹೇಳಿದ್ಧಾರೆ.
“ಕೊನೆಯ ಬಾರಿಗೆ ನಾನು ಪೂಜಾಳನ್ನು ಕಳೆದ ಗುರುವಾರ ನೋಡಿದ್ದೆ. ಆಕೆ ದಿನಸಿ ಸಾಮಗ್ರಿಗಳನ್ನು ತರಲು ಮೂರನೇ ಮಹಡಿಯಿಂದ ಕೆಳಗಿಳಿದು ಬರುತ್ತಿದ್ದಳು. ಆನಂತರ ಆಕೆ ಕಾಣಿಸಿಕೊಂಡಿರಲಿಲ್ಲ. ಪಕ್ಕದ ಮನೆಯ ಯುವಕರು ಮನೆಯಿಂದ ಭಾರಿ ದುರ್ನಾತ ಬರುತ್ತಿದೆ ಎಂದು ತಿಳಿಸಿದರು. ತಕ್ಷಣ ಬಾಗಿಲು ಒಡೆದು ನೋಡಿದಾಗ ಪೂಜಾ ಬೆತ್ತಲಾಗಿ, ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮೃತದೇಹ ಸಂಪೂರ್ಣವಾಗಿ ಕೊಳೆತು ಹೋಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ : “ಮಗುವಾದ ಮೇಲೆ ಅತ್ಯಾಚಾರದ ಆರೋಪವೇ?”: ಲಿವ್-ಇನ್ ಸಂಬಂಧಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ


















