ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ದಸರಾ ಚಲನಚಿತ್ರೋತ್ಸವಕ್ಕೆ ಈ ಬಾರಿ ಜಿಲ್ಲಾಡಳಿತ ಕೊಕ್ ನೀಡಿದೆ. ಚಲನಚಿತ್ರೋತ್ಸವ ನಡೆಸಲು ಅನುಮತಿ ನೀಡದಿರುವುದರ ಜೊತೆಗೆ, ಈ ಬಾರಿ ದಸರಾ ಚಲನಚಿತ್ರೋತ್ಸವ ಉಪ ಸಮಿತಿಯನ್ನೇ ರಚಿಸದಿರುವ ಜಿಲ್ಲಾಡಳಿತದ ನಿರ್ಧಾರಕ್ಕೆ ಕಲಾಪ್ರೇಮಿಗಳು ಮತ್ತು ವಿವಿಧ ಸಂಘಟನೆಗಳು ತೀವ್ರ ಬೇಸರ ವ್ಯಕ್ತಪಡಿಸಿವೆ. ದಸರಾ ಮಹೋತ್ಸವದ ಭಾಗವಾಗಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಚಲನಚಿತ್ರೋತ್ಸವವನ್ನು ಏಕಾಏಕಿ ರದ್ದುಪಡಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಕಳೆದ ವರ್ಷ ನಡೆದ ದಸರಾ ಚಲನಚಿತ್ರೋತ್ಸವದಲ್ಲಿ ವಿಶ್ವದ ವಿವಿಧ ದೇಶಗಳ 17 ಸಿನಿಮಾಗಳು, 25 ಭಾರತೀಯ ಭಾಷೆಗಳ ಚಿತ್ರಗಳು, 18 ಕನ್ನಡ ಸಿನಿಮಾಗಳು ಹಾಗೂ 8 ಮಕ್ಕಳ ಚಲನಚಿತ್ರಗಳು ಪ್ರದರ್ಶನಗೊಂಡಿದ್ದವು. ಸಿನಿಮಾ ಮತ್ತು ಕಲೆಯ ಬಗ್ಗೆ ಆಸಕ್ತಿ ಹೊಂದಿರುವ ಪ್ರೇಕ್ಷಕರಿಗೆ ದಸರಾ ಸಂದರ್ಭದಲ್ಲಿ ವಿಭಿನ್ನ ಸಿನಿಮಾಗಳನ್ನು ವೀಕ್ಷಿಸುವ ಅವಕಾಶವನ್ನು ಈ ಚಲನಚಿತ್ರೋತ್ಸವ ಕಲ್ಪಿಸುತ್ತಿತ್ತು. ಇದರ ಜೊತೆಗೆ ಪ್ರತಿ ವರ್ಷ ಉದಯೋನ್ಮುಖ ನಿರ್ದೇಶಕರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕಿರುಚಿತ್ರ ಸ್ಪರ್ಧೆಯನ್ನೂ ಆಯೋಜಿಸಲಾಗುತ್ತಿತ್ತು. ಸ್ಪರ್ಧೆಯಲ್ಲಿ ಆಯ್ಕೆಯಾಗುವ 10 ಅತ್ಯುತ್ತಮ ಕಿರುಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಯುವ ನಿರ್ದೇಶಕರು ಮತ್ತು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿತ್ತು.
ಆದರೆ ಈ ಬಾರಿ ದಸರಾ ಚಲನಚಿತ್ರೋತ್ಸವವನ್ನು ರದ್ದುಪಡಿಸಿರುವ ಜಿಲ್ಲಾಡಳಿತದ ನಿರ್ಧಾರಕ್ಕೆ ಬೇರೆ ಕಾರಣವೂ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಬಾರಿ ದಸರಾ ಮಹೋತ್ಸವಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಕಂಬಳ ಕ್ರೀಡೆಗೆ ಹಣ ಹೊಂದಿಸುವ ಉದ್ದೇಶದಿಂದಲೇ ಚಲನಚಿತ್ರೋತ್ಸವವನ್ನು ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ದಸರಾ ಮಹೋತ್ಸವದ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದ ಚಲನಚಿತ್ರೋತ್ಸವಕ್ಕೆ ಮೀಸಲಾಗುತ್ತಿದ್ದ ಹಣವನ್ನು ಕಂಬಳ ಆಯೋಜನೆಗೆ ಬಳಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ.

ಇನ್ನೊಂದೆಡೆ, ಕಳೆದ ಐದು ವರ್ಷಗಳಿಂದ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ನೀರಸವಾಗಿತ್ತು ಎಂದು ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ. ಕೆಲವು ಪ್ರದರ್ಶನಗಳಿಗೆ ಕನಿಷ್ಠ ಐದು ಮಂದಿ ಪ್ರೇಕ್ಷಕರೂ ಆಗಮಿಸದಿರುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದ್ದು, ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಹಣವನ್ನು ಖರ್ಚು ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಥಿಯೇಟರ್‌ಗಳ ಬಾಡಿಗೆ ಹಾಗೂ ನಿರ್ವಹಣೆಗೆ ಸುಮಾರು 40.50 ಲಕ್ಷ ರೂಪಾಯಿ ವೆಚ್ಚವಾಗಿತ್ತು. ಈ ಬಾರಿ ಚಲನಚಿತ್ರೋತ್ಸವ ಮುಂದುವರಿಸಿದ್ದರೆ 45 ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇತ್ತು ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕ ಅನುದಾನ ವ್ಯರ್ಥವಾಗುವುದನ್ನು ತಪ್ಪಿಸುವ ಉದ್ದೇಶದಿಂದಲೇ ಈ ಬಾರಿ ಚಲನಚಿತ್ರೋತ್ಸವ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಕಲಾಪ್ರೇಮಿಗಳು, ಸಿನಿಮಾ ಕ್ಷೇತ್ರದವರು ಹಾಗೂ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮವನ್ನೇ ಸಂಪೂರ್ಣವಾಗಿ ರದ್ದುಪಡಿಸುವುದು ಸರಿಯಲ್ಲ. ದಸರಾ ಮಹೋತ್ಸವದ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಚಲನಚಿತ್ರೋತ್ಸವಕ್ಕೂ ತನ್ನದೇ ಆದ ಸ್ಥಾನವಿದೆ ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಚಲನಚಿತ್ರೋತ್ಸವವನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು ಮತ್ತು ಈ ಬಾರಿಯೂ ಅದನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಖ್ಯಾತ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಮೈಸೂರಿನಲ್ಲಿ ಸಭೆ ನಡೆಸಿದ್ದಾರೆ. ಚಲನಚಿತ್ರೋತ್ಸವದ ಮಹತ್ವ, ಯುವ ಪ್ರತಿಭೆಗಳಿಗೆ ಸಿಗುತ್ತಿದ್ದ ಅವಕಾಶ ಹಾಗೂ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅದರ ಸ್ಥಾನ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. ಅಂತಿಮವಾಗಿ ಈ ಬಾರಿ ದಸರಾ ಚಲನಚಿತ್ರೋತ್ಸವವನ್ನು ಮುಂದುವರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಹೀಗಾಗಿ ಮೈಸೂರು ದಸರಾ 2026ರಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಚಲನಚಿತ್ರೋತ್ಸವ ಮರೆಯಾಗಲಿದೆಯೇ ಅಥವಾ ಕಲಾಪ್ರೇಮಿಗಳ ಒತ್ತಾಯಕ್ಕೆ ಮಣಿದು ಸರ್ಕಾರ ಮತ್ತೆ ಚಿತ್ರೋತ್ಸವಕ್ಕೆ ಅವಕಾಶ ನೀಡಲಿದೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಗಾಯಗಳ ಸರಮಾಲೆಗೆ BCCI ಶಾಕ್ ; ಶ್ರೀಲಂಕಾ ಪ್ರವಾಸದ ಬಳಿಕ ಟೀಂ ಇಂಡಿಯಾ ಫಿಸಿಯೊ ಕಮಲೇಶ್ ಜೈನ್ ವಜಾ


















