ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತ್ಯಂತ ಕಳಪೆ ಪವರ್‌ಪ್ಲೇ ಪ್ರದರ್ಶನ ನೀಡುವ ಮೂಲಕ ಬೇಡದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ತವರಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (ಏಪ್ರಿಲ್ 27, 2026) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ವಿಭಾಗ ಅಕ್ಷರಶಃ ಪೆವಿಲಿಯನ್ ಪರೇಡ್ ನಡೆಸಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ದಂಗಾಗಿಸಿದೆ.
ಕೇವಲ ಎರಡು ದಿನಗಳ ಹಿಂದಷ್ಟೇ ಐಪಿಎಲ್ ಇತಿಹಾಸದ ಬೃಹತ್ ಮೊತ್ತವನ್ನು ಕಲೆಹಾಕಿ ಬೀಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಈ ಪಂದ್ಯದಲ್ಲಿ ಸಂಪೂರ್ಣ ಮಂಕಾಯಿತು. ಆರಂಭಿಕ 6 ಓವರ್‌ಗಳ ಪವರ್‌ಪ್ಲೇ ಅವಧಿಯಲ್ಲಿ ಡೆಲ್ಲಿ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನಿಲ್ಲಲು ಪರದಾಡಿದರು. ಇದರ ಪರಿಣಾಮವಾಗಿ, ಪವರ್‌ಪ್ಲೇ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 13 ರನ್ ಗಳಿಸಿ ತನ್ನ ಪ್ರಮುಖ 6 ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸ್ಥಿತಿಗೆ ತಲುಪಿತು.
ಆರ್‌ಸಿಬಿ ವೇಗಿಗಳ ಮಾರಕ ದಾಳಿ
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಕ್ರಮಾಂಕವನ್ನು ಅಸ್ತವ್ಯಸ್ತಗೊಳಿಸುವಲ್ಲಿ ಆರ್ಸಿಬಿಯ ಅನುಭವಿ ವೇಗಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹ್ಯಾಝಲ್‌ವುಡ್ ಅವರ ಪಾತ್ರ ಪ್ರಮುಖವಾಗಿತ್ತು. ಈ ಇಬ್ಬರು ಘಟಾನುಘಟಿ ಬೌಲರ್‌ಗಳ ನಿಖರ ಹಾಗೂ ಮಾರಕ ದಾಳಿಗೆ ಮರುರುತ್ತರ ನೀಡಲಾಗದ ಡೆಲ್ಲಿಯ ಅಗ್ರಕ್ರಮಾಂಕದ ಆಟಗಾರರು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಸೇರಿಕೊಂಡರು.
ಸನ್‌ರೈಸರ್ಸ್ ಹೈದರಾಬಾದ್ ಹೆಸರಲ್ಲಿದ್ದ ಬೇಡದ ದಾಖಲೆ ಪತನ
ಈ ಕಳಪೆ ಪ್ರದರ್ಶನದ ಮೂಲಕ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಹೆಸರಲ್ಲಿದ್ದ ಬೇಡದ ದಾಖಲೆಯನ್ನು ಡೆಲ್ಲಿ ತನ್ನದಾಗಿಸಿಕೊಂಡಿದೆ. 2022ರಲ್ಲಿ ಪುಣೆಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಪವರ್‌ಪ್ಲೇಯಲ್ಲಿ 3 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿದ್ದು ಇದುವರೆಗಿನ ಅತಿ ಕಡಿಮೆ ಸ್ಕೋರ್ ಆಗಿತ್ತು. ಇದೀಗ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಳ್ಳುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಆ ದಾಖಲೆಯನ್ನು ಹಿಂದಿಕ್ಕಿ, ಐಪಿಎಲ್ ಇತಿಹಾಸದ ಅತ್ಯಂತ ಕೆಟ್ಟ ಪವರ್‌ಪ್ಲೇ ಸ್ಕೋರ್ ದಾಖಲಿಸಿದೆ.
ಐಪಿಎಲ್ ಇತಿಹಾಸದ ಅತ್ಯಂತ ಕಡಿಮೆ ಪವರ್‌ಪ್ಲೇ ಸ್ಕೋರ್‌ಗಳ ಪಟ್ಟಿ ಇಲ್ಲಿದೆ:
- 2026: ಡೆಲ್ಲಿ ಕ್ಯಾಪಿಟಲ್ಸ್ (13/6) – ಆರ್‌ಸಿಬಿ ವಿರುದ್ಧ (ದೆಹಲಿ)
- 2022: ಸನ್‌ರೈಸರ್ಸ್ ಹೈದರಾಬಾದ್ (14/3) – ರಾಜಸ್ಥಾನ್ ರಾಯಲ್ಸ್ ವಿರುದ್ಧ (ಪುಣೆ)
- 2009: ರಾಜಸ್ಥಾನ್ ರಾಯಲ್ಸ್ (14/2) – ಆರ್‌ಸಿಬಿ ವಿರುದ್ಧ (ಕೇಪ್ ಟೌನ್)
- 2011: ಚೆನ್ನೈ ಸೂಪರ್ ಕಿಂಗ್ಸ್ (15/2) – ಕೆಕೆಆರ್ ವಿರುದ್ಧ (ಕೋಲ್ಕತ್ತಾ)
- 2015: ಚೆನ್ನೈ ಸೂಪರ್ ಕಿಂಗ್ಸ್ (16/1) – ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ (ರಾಯ್ಪುರ)
ಇದನ್ನೂ ಓದಿ : ಬೆಂಗಳೂರಲ್ಲಿ ಯುವತಿಯ ನಿಗೂಢ ಸಾವು ; ಕೊಳೆತ ಸ್ಥಿತಿಯಲ್ಲಿ ಬೆತ್ತಲೆ ಮೃತದೇಹ ಪತ್ತೆ!



















