ಬೆಂಗಳೂರು : ಜಾರಿ ನಿರ್ದೇಶನಾಲಯದ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಇಡಿ ದಾಳಿಯಿಂದ ನನಗೇನೂ ಡ್ಯಾಮೇಜ್ ಆಗಲ್ಲ. ಅಧಿಕಾರಿಗಳು ನೋಟಿಸ್ ಕೊಟ್ಟು ಕರೆಸಿದರೆ ಸರಿಯಾದ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ. ಆಫ್ರಿಕಾದಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಇಡಿ ಅಧಿಕಾರಿಗಳಿಗೆ ಅನುಮಾನವಿದೆ. ಆದರೆ ತಾವು ಯಾವುದೇ ಹೂಡಿಕೆ ಮಾಡಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಕೇವಲ ಆರೋಪ ಅಥವಾ ಅನುಮಾನದ ಆಧಾರದ ಮೇಲೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಇನ್ನೂ ಸಾಕಷ್ಟು ಪ್ರಕ್ರಿಯೆ ಬಾಕಿ ಇದ್ದು, ತನಿಖೆಗೆ ಮೂರುರಿಂದ ಆರು ತಿಂಗಳವರೆಗೂ ಅವಕಾಶವಿದೆ. ಅಧಿಕಾರಿಗಳು ಅನುಮಾನಾಸ್ಪದ ಎಂದು ಹೇಳಿರುವುದು ಅಂತಿಮ ತೀರ್ಮಾನವಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಇಡಿ ಅಧಿಕಾರಿಗಳಿಗೆ ದೂರು ನೀಡಿರುವವರು ಯಾರು ಎಂಬುದು ತಮಗೆ ಗೊತ್ತಿದೆ ಎಂದು ಹೇಳಿದ ಸತೀಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೂ ಈ ಬಗ್ಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಪಕ್ಷದವರೇ ದೂರು ನೀಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಬಿಜೆಪಿಯವರಾಗಿರಬಹುದು ಅಥವಾ ಅವರ ಸಂಬಂಧಿಕರಾಗಿರಬಹುದು. ಯಾರು ದೂರು ನೀಡಿದ್ದಾರೆ ಎಂಬುದು ಗೊತ್ತಿದೆ ಎಂದು ಹೇಳಿದ್ದಾರೆ.
ಯಾರು ದೂರು ನೀಡಿದ್ದರೂ ಮುಖ್ಯಮಂತ್ರಿ ಹಾಗೂ ಡಿಸಿಎಂ ಈ ವಿಚಾರದ ಬಗ್ಗೆ ಗಮನಹರಿಸಲಿದ್ದಾರೆ. ದೂರುದಾರರ ಬಗ್ಗೆ ತಮಗೆ ತಿಳಿದಿರುವ ಮಾಹಿತಿಯನ್ನು ಈಗಾಗಲೇ ನಾಯಕರ ಗಮನಕ್ಕೆ ತಂದಿದ್ದೇನೆ ಎಂದು ಸತೀಶ್ ಜಾರಕಿಹೊಳಿ ವಿವರಿಸಿದ್ದಾರೆ.
ಇನ್ನು ಸತೀಶ್ ಜಾರಕಿಹೊಳಿ ಅವರನ್ನು ಬೆಂಬಲಿಸಿ ಮಾಜಿ ಉದ್ಯಮಿ ವಿಜಯ್ ಮಲ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, “ಥ್ಯಾಂಕ್ಸ್” ಎಂದು ಹೇಳಿ ನಕ್ಕರು. ಬಳಿಕ, “ಅವರೂ ನಮ್ಮ ಫ್ಯಾನ್ಸ್ ಕ್ಲಬ್ಗೆ ಸೇರಿದ್ರು ಹಾಗಿದ್ರೆ” ಎಂದು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ದೆಹಲಿ ಪರ ಮತ್ತೆ ಕಣಕ್ಕಿಳಿಯಲಿದ್ದಾರಾ ಕೊಹ್ಲಿ? ರೋಹನ್ ಜೇಟ್ಲಿ ಮಹತ್ವದ ಅಪ್ಡೇಟ್



















