ನವದೆಹಲಿ : ಆಮ್ ಆದ್ಮಿ ಪಕ್ಷದ (ಎಎಪಿ) 7 ರಾಜ್ಯಸಭಾ ಸದಸ್ಯರು ರಾಜೀನಾಮೆ ನೀಡಿ ಬಿಜೆಪಿ ಜತೆ ವಿಲೀನಗೊಳ್ಳುವುದಾಗಿ ಘೋಷಿಸಿದ ಬೆನ್ನಲ್ಲೇ ಆಮ್ ಆದ್ಮಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಹಾಗೂ ದೆಹಲಿ ಸಚಿವ ಪರ್ವೇಶ್ ವರ್ಮಾ, ಅವರನ್ನು ದೆಹಲಿಯ ‘ರೆಹಮಾನ್ ಡಕಾಯಿತ’ ಎಂದು ಜರಿದಿದ್ದಾರೆ. ಅಲ್ಲದೆ, ಕೇಜ್ರಿವಾಲ್ ಅವರ ಹೊಸ ನಿವಾಸದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ‘ಶೀಶ್ ಮಹಲ್ 2’ (ಐಷಾರಾಮಿ ಬಂಗಲೆ) ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಆದರೆ, ಈ ಚಿತ್ರಗಳು ಸಂಪೂರ್ಣ ನಕಲಿ ಎಂದು ಕಿಡಿಕಾರಿರುವ ಎಎಪಿ, ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದೆ.

ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ ವಾಗ್ದಾಳಿ
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪರ್ವೇಶ್ ವರ್ಮಾ, ಸಾಮಾನ್ಯ ಮನುಷ್ಯನಂತೆ ಬದುಕುತ್ತೇನೆ ಎಂದು ಹೇಳುತ್ತಿದ್ದ ಕೇಜ್ರಿವಾಲ್ ಇದೀಗ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 95, ಲೋಧಿ ಎಸ್ಟೇಟ್‌ನಲ್ಲಿರುವ ತಮ್ಮ ಹೊಸ ಸರ್ಕಾರಿ ಬಂಗಲೆಗೆ ಕೇಜ್ರಿವಾಲ್ ವಾಸ್ತವ್ಯ ಬದಲಾಯಿಸಿದ್ದು, ಆ ಮನೆಯ ಐಷಾರಾಮಿ ದೃಶ್ಯಗಳು ಎಂದು ಹೇಳಲಾದ ಕೆಲವು ಫೋಟೋಗಳನ್ನು ಪ್ರದರ್ಶಿಸಿದ್ದಾರೆ. ದೆಹಲಿಯ ಮತದಾರರಿಂದ ತಿರಸ್ಕೃತರಾದ ನಂತರ ಕೇಜ್ರಿವಾಲ್ ಪಂಜಾಬ್‌ನತ್ತ ಮುಖ ಮಾಡಿದ್ದಾರೆ. ಅಲ್ಲಿನ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದ ಸುತ್ತಮುತ್ತಲಿನ ಹಲವು ಸರ್ಕಾರಿ ಬಂಗಲೆಗಳನ್ನು ಕೇಜ್ರಿವಾಲ್, ಸಂಜಯ್ ಸಿಂಗ್, ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ಸೇರಿದಂತೆ ಎಎಪಿ ನಾಯಕರು ಅತಿಕ್ರಮಿಸಿಕೊಂಡಿದ್ದಾರೆ ಎಂದು ವರ್ಮಾ ಗಂಭೀರ ಆರೋಪ ಮಾಡಿದ್ದಾರೆ.

ಫೋಟೋಗಳು ನಕಲಿ, ಮಾನನಷ್ಟ ಮೊಕದ್ದಮೆ ಎಚ್ಚರಿಕೆ
ಬಿಜೆಪಿ ನಾಯಕರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ವರ್ಮಾ ಪ್ರದರ್ಶಿಸಿರುವ ಫೋಟೋಗಳು ನೂರಕ್ಕೆ ನೂರರಷ್ಟು ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಸುಳ್ಳು ಚಿತ್ರಗಳನ್ನು ಪ್ರಸಾರ ಮಾಡುವ ಟಿವಿ ಚಾನೆಲ್‌ಗಳು ಮತ್ತು ಪರ್ವೇಶ್ ವರ್ಮಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಸಿದ್ಧರಿರುವುದಾಗಿ ಎಚ್ಚರಿಸಿದ್ದಾರೆ. ಜೊತೆಗೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ಪರ್ವೇಶ್ ವರ್ಮಾ ಅವರು ತಮ್ಮ ನಿವಾಸಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಿ, ಆಗ ಯಾರ ಮನೆ ನಿಜಕ್ಕೂ ಐಷಾರಾಮಿಯಾಗಿದೆ ಎಂಬುದು ಜನರಿಗೆ ತಿಳಿಯುತ್ತದೆ ಎಂದು ಸವಾಲು ಹಾಕಿದ್ದಾರೆ. ದೆಹಲಿ ಸಚಿವೆ ಅತಿಶಿ ಕೂಡ ಈ ಚಿತ್ರಗಳನ್ನು ನಕಲಿ ಎಂದು ಕರೆದು ಬಿಜೆಪಿ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಸಂಸದರ ವಲಸೆ, ಪೋಸ್ಟರ್ ವಾರ್
ರಾಘವ್ ಛಡ್ಡಾ, ಸ್ವಾತಿ ಮಲಿವಾಲ್ ಸೇರಿದಂತೆ ಎಎಪಿಯ ಏಳು ಮಂದಿ ರಾಜ್ಯಸಭಾ ಸಂಸದರು ದಿಢೀರನೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಮರುದಿನವೇ ಈ ರಾಜಕೀಯ ಕೆಸರೆರಚಾಟ ತೀವ್ರಗೊಂಡಿದೆ. ಪಕ್ಷವು ತನ್ನ ಮೂಲ ತತ್ವಗಳಿಂದ ವಿಮುಖವಾಗಿದೆ ಎಂದು ಆರೋಪಿಸಿ ಛಡ್ಡಾ ಮತ್ತು ಇತರರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸಮ್ಮುಖದಲ್ಲಿ ಕಮಲ ಪಾಳಯ ಸೇರಿದ್ದರು. ಇದನ್ನು ತೀವ್ರವಾಗಿ ಖಂಡಿಸಿರುವ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್, ಪಕ್ಷಾಂತರಿಗಳನ್ನು ‘ದ್ರೋಹಿಗಳು’ ಎಂದು ಕರೆದಿದ್ದಾರೆ.
ಪಂಜಾಬ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ‘ಆಪರೇಷನ್ ಕಮಲ’ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ, ದೆಹಲಿ ಬಿಜೆಪಿ ಘಟಕವು ಸಾಮಾಜಿಕ ಜಾಲತಾಣದಲ್ಲಿ ಕೇಜ್ರಿವಾಲ್ ಅವರನ್ನು ಸರ್ವಾಧಿಕಾರಿಯಂತೆ ಬಿಂಬಿಸುವ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದು, “ಎ ಫಿಲ್ಮ್ ಬೈ- ಎಎಪಿ-ದಾ, ಡೈರೆಕ್ಟೆಡ್ ಬೈ ಅರವಿಂದ್ ಕೇಜ್ರಿವಾಲ್” ಎಂದು ವ್ಯಂಗ್ಯವಾಡಿದೆ. ಒಡೆದ ಪೊರಕೆಗಳು ಮತ್ತು ಬಿಸಾಡಿದ ಟೋಪಿಗಳನ್ನು ಹಿಡಿದು ಕಾರ್ಯಕರ್ತರು ನಿರಾಶೆಯಿಂದ ಹೊರನಡೆಯುತ್ತಿರುವಂತೆ ಪೋಸ್ಟರ್‌ನಲ್ಲಿ ಚಿತ್ರಿಸಲಾಗಿದೆ.
ಇದನ್ನೂ ಓದಿ : ಬಿಜೆಪಿ ಸೇರಿದ ರಾಘವ್ ಚಡ್ಡಾಗೆ ‘ಜೆನ್-ಜಿ’ ಶಾಕ್ : 24 ಗಂಟೆಯಲ್ಲಿ 10 ಲಕ್ಷ ಫಾಲೋವರ್ಸ್ ಕಳೆದುಕೊಂಡ ಯುವ ನಾಯಕ!



















