ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವಾಹನ ನಿಲುಗಡೆಗೆ ಕಡಿವಾಣ ಹಾಕುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಮುಂದಾಗಿದೆ. ರಸ್ತೆಗಳನ್ನು ಎ, ಬಿ ಮತ್ತು ಸಿ ವರ್ಗಗಳಾಗಿ ವಿಂಗಡಿಸಿ, ಆನ್‌ಸ್ಟ್ರೀಟ್ ಹಾಗೂ ಆಫ್‌ಸ್ಟ್ರೀಟ್ ಪಾರ್ಕಿಂಗ್‌ಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸುವ ಪ್ರಸ್ತಾವನೆ ರೂಪಿಸಲಾಗಿದೆ.
ಹೊಸ ನೀತಿಯ ಪ್ರಕಾರ ಆನ್‌ಸ್ಟ್ರೀಟ್ ಪಾರ್ಕಿಂಗ್‌ಗೆ ಸಿ ವರ್ಗದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ಗಂಟೆಗೆ 20 ಹಾಗೂ ಲಘು ವಾಹನಗಳಿಗೆ 40, ಬಿ ವರ್ಗದ ರಸ್ತೆಯಲ್ಲಿ ಕ್ರಮವಾಗಿ 30 ಮತ್ತು 60, ಎ ವರ್ಗದ ರಸ್ತೆಯಲ್ಲಿ 40 ಮತ್ತು 80 ಶುಲ್ಕ ವಿಧಿಸುವ ಪ್ರಸ್ತಾವನೆ ಇದೆ. ಆಫ್‌ಸ್ಟ್ರೀಟ್ ಪಾರ್ಕಿಂಗ್‌ಗೆ ಸಿ ವರ್ಗದಲ್ಲಿ ದ್ವಿಚಕ್ರ ವಾಹನಗಳಿಗೆ ಗಂಟೆಗೆ 10 ಹಾಗೂ ಲಘು ವಾಹನಗಳಿಗೆ 20, ಬಿ ವರ್ಗದಲ್ಲಿ 15 ಮತ್ತು 30, ಎ ವರ್ಗದಲ್ಲಿ 20 ಮತ್ತು 40 ಶುಲ್ಕ ನಿಗದಿಪಡಿಸುವ ಉದ್ದೇಶವಿದೆ.
ಇನ್ನು ಆಫ್‌ಸ್ಟ್ರೀಟ್ ಪಾರ್ಕಿಂಗ್ ಬಳಸುವವರಿಗೆ ಮಾಸಿಕ ಪಾಸ್ ವ್ಯವಸ್ಥೆಯನ್ನೂ ಪರಿಚಯಿಸಲು ಉದ್ದೇಶಿಸಲಾಗಿದೆ. ಸಿ ವರ್ಗದಲ್ಲಿ ದ್ವಿಚಕ್ರ ವಾಹನಗಳಿಗೆ 1,000 ಹಾಗೂ ಲಘು ವಾಹನಗಳಿಗೆ 2,000, ಬಿ ವರ್ಗದಲ್ಲಿ 1,500 ಹಾಗೂ 3,000, ಎ ವರ್ಗದಲ್ಲಿ ದ್ವಿಚಕ್ರ ವಾಹನಗಳಿಗೆ 2,000 ಮಾಸಿಕ ಪಾಸ್ ದರ ನಿಗದಿಪಡಿಸುವ ಪ್ರಸ್ತಾವನೆ ಇದೆ.
ಪಾರ್ಕಿಂಗ್‌ಗೆ ಸಂಪೂರ್ಣ ನಿಷೇಧ :
ಮೆಟ್ರೋ ನಿಲ್ದಾಣ ಮತ್ತು ಬಸ್ ನಿಲ್ದಾಣಗಳ ಸುತ್ತಮುತ್ತ, ಆರ್ಟಿರಿಯಲ್ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ. ಸಿಗ್ನಲ್‌ನಿಂದ 50 ಮೀಟರ್ ವ್ಯಾಪ್ತಿಯಲ್ಲಿ ಹಾಗೂ ಉಪಮುಖ್ಯ ರಸ್ತೆಗಳಲ್ಲಿ 25 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ. ಮನೆಗಳ ಮುಂದೆ ವಾಹನ ನಿಲುಗಡೆ ಮಾಡುವ ವಿಚಾರದಲ್ಲೂ ಹೊಸ ನಿಯಮ ತರಲು ಉದ್ದೇಶಿಸಲಾಗಿದೆ.
ಮನೆ ಮಾಲೀಕರು ತಮ್ಮ ಬಾಡಿಗೆದಾರರಿಗೆ ವಾಹನ ನಿಲ್ಲಿಸಲು ಸೂಕ್ತ ಸ್ಥಳ ಒದಗಿಸಬೇಕು. ಜಾಗ ಕಲ್ಪಿಸದೆ ರಸ್ತೆಯಲ್ಲಿ ವಾಹನ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾದರೆ ದಂಡ ವಿಧಿಸುವ ಪ್ರಸ್ತಾವನೆ ಇದೆ. ಮನೆ ಮುಂದೆ ಪಾರ್ಕಿಂಗ್‌ಗೆ ಅವಕಾಶ ನೀಡಿದಲ್ಲಿ ಮನೆ ಮಾಲೀಕರ ಮೇಲೂ ಶುಲ್ಕದ ಹೊಣೆ ಬೀಳುವ ಸಾಧ್ಯತೆ ಇದೆ.
ಖಾಲಿ ನಿವೇಶನದಲ್ಲಿ ಪಾರ್ಕಿಂಗ್ ಮಾಡಿದರೆ ತೆರಿಗೆ ವಿನಾಯಿತಿ
ನಗರದಲ್ಲಿರುವ ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಸ್ಥಳಗಳಾಗಿ ಅಭಿವೃದ್ಧಿಪಡಿಸಲು ಜಿಬಿಎ ಪ್ರೋತ್ಸಾಹ ನೀಡಲಿದೆ. ಖಾಲಿ ನಿವೇಶನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಪ್ರಸ್ತಾವನೆಯೂ ಇದೆ. ಸರ್ಕಾರಿ ನಿಗಮಗಳ ವ್ಯಾಪ್ತಿಯ ಖಾಲಿ ಜಾಗಗಳನ್ನೂ ಪಾರ್ಕಿಂಗ್‌ಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದ್ದು, ಸಂಬಂಧಪಟ್ಟ ನಿಗಮಗಳಿಂದ ಅನುಮತಿ ಪಡೆದು ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಉದ್ದೇಶಿಸಲಾಗಿದೆ.
ರಾತ್ರಿ ಪಾರ್ಕಿಂಗ್‌ಗೆ ಅವಕಾಶ
ಆಫ್‌ಸ್ಟ್ರೀಟ್ ಪಾರ್ಕಿಂಗ್ ಸ್ಥಳಗಳಲ್ಲಿ ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. ನಿಯಮಿತವಾಗಿ ವಾಹನ ನಿಲ್ಲಿಸುವವರಿಗೆ ಮಾಸಿಕ ಪಾಸ್ ಪಡೆಯುವ ಅವಕಾಶವೂ ಇರಲಿದೆ. ಇನ್ನು ಬೈಸಿಕಲ್‌ಗಳ ನಿಲುಗಡೆಗೆ ಶುಲ್ಕ ವಿಧಿಸದಿರಲು ಹಾಗೂ ಆಟೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕದಿಂದ ವಿನಾಯಿತಿ ನೀಡಲು ಪ್ರಸ್ತಾವಿಸಲಾಗಿದೆ.
ಒಟ್ಟಾರೆ, ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಅಕ್ರಮ ಪಾರ್ಕಿಂಗ್‌ಗೆ ಕಡಿವಾಣ ಹಾಕುವುದು ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಜಿಬಿಎ ಹೊಸ ಪಾರ್ಕಿಂಗ್ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ನೀತಿ ಜಾರಿಯಾದ ಬಳಿಕ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವ ವಾಹನ ಸವಾರರ ಜೇಬಿಗೆ ಪಾರ್ಕಿಂಗ್ ಶುಲ್ಕದ ಹೊರೆ ಬೀಳಲಿದೆ.
ಇದನ್ನೂ ಓದಿ : ಹತ್ತೇ ದಿನಗಳಲ್ಲಿ ಚಿನ್ನದ ಬೆಲೆ 10 ಸಾವಿರ ರೂ. ಏರಿಕೆ : ಇಂದಿನ ದರ ಎಷ್ಟಿದೆ?



















