ನವದೆಹಲಿ : ಆಮ್ ಆದ್ಮಿ ಪಕ್ಷ (ಎಎಪಿ) ತೊರೆದು 6 ಮಂದಿ ರಾಜ್ಯಸಭಾ ಸಂಸದರೊಂದಿಗೆ ಅಚ್ಚರಿಯ ರೀತಿಯಲ್ಲಿ ಬಿಜೆಪಿ ಸೇರಿದ ರಾಘವ್ ಚಡ್ಡಾ ಅವರ ನಡೆ ಯುವಜನತೆಗೆ, ವಿಶೇಷವಾಗಿ ‘ಜೆನ್-ಜಿ’ (Gen Z) ಸಮುದಾಯಕ್ಕೆ ಕಿಂಚಿತ್ತೂ ಇಷ್ಟವಾದಂತಿಲ್ಲ. ಆಕರ್ಷಕ ವ್ಯಕ್ತಿತ್ವದ ಮೂಲಕ ಯುವಜನರಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ರಾಜ್ಯಸಭಾ ಸಂಸದ ಚಡ್ಡಾ, ಪಕ್ಷಾಂತರ ಮಾಡಿದ ಕೇವಲ 24 ಗಂಟೆಗಳ ಒಳಗಾಗಿ ಬರೋಬ್ಬರಿ 10 ಲಕ್ಷ (ಒಂದು ಮಿಲಿಯನ್) ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಕುಸಿದ ಜನಪ್ರಿಯತೆ, ಟ್ರೆಂಡ್ ಆಯ್ತು ಅನ್‌ಫಾಲೋ ಅಭಿಯಾನ
ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಫಾಲೋವರ್ಸ್ ಸಂಖ್ಯೆಯನ್ನು ನಾಯಕರ ಜನಪ್ರಿಯತೆಯ ಅಳತೆಗೋಲಾಗಿ ನೋಡಲಾಗುತ್ತದೆ. ಶುಕ್ರವಾರದವರೆಗೆ 37 ವರ್ಷದ ಈ ಯುವ ನಾಯಕನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 14.6 ದಶಲಕ್ಷ ಫಾಲೋವರ್ಸ್ ಇದ್ದರು. ಆದರೆ ಶನಿವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಆ ಸಂಖ್ಯೆ 13.5 ದಶಲಕ್ಷಕ್ಕೆ ಕುಸಿದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಸಿಪಿ (ಎಸ್‌ಪಿ) ವಕ್ತಾರ ಅನೀಶ್ ಗವಾಂಡೆ, “ಇನ್‌ಸ್ಟಾಗ್ರಾಮ್‌ನಲ್ಲಿ ಜೆನ್-ಜಿಗಳ ‘ಅನ್‌ಫಾಲೋ’ ಅಭಿಯಾನದಿಂದಾಗಿ ರಾಘವ್ ಚಡ್ಡಾ ಅವರ ಫಾಲೋವರ್ಸ್ ಸಂಖ್ಯೆ 24 ಗಂಟೆಗಳಲ್ಲಿ 10 ಲಕ್ಷದಷ್ಟು ಕಡಿಮೆಯಾಗಿದೆ. ಇಂಟರ್ನೆಟ್ ನಿಮ್ಮನ್ನು ರಾತ್ರೋರಾತ್ರಿ ಹೀರೋ ಮಾಡಬಲ್ಲದು, ಅದೇ ರೀತಿ ರಾತ್ರೋರಾತ್ರಿ ಜೀರೋ ಕೂಡ ಮಾಡಬಲ್ಲದು” ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ #unfollowRaghavChadha ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಆಗುತ್ತಿದೆ.
ಯುವಜನರ ನೆಚ್ಚಿನ ನಾಯಕನಾಗಿದ್ದ ಛಡ್ಡಾ
ರಾಜಕೀಯದಲ್ಲಿ ಸಾಮಾನ್ಯವಾಗಿ ನಿರ್ಲಕ್ಷ್ಯಕ್ಕೊಳಗಾಗುವ, ಆದರೆ ದೈನಂದಿನ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವ ಮೂಲಕ ರಾಘವ್ ಚಡ್ಡಾ ಯುವಜನರ ಗಮನ ಸೆಳೆದಿದ್ದರು. ಪಿತೃತ್ವ ರಜೆ, ಟ್ರಾಫಿಕ್ ಸಮಸ್ಯೆ, ಟೆಲಿಕಾಂ ಕಂಪನಿಗಳ ದೈನಂದಿನ ಡೇಟಾ ಮಿತಿ, ವಿಮಾನ ನಿಲ್ದಾಣಗಳಲ್ಲಿ ದುಬಾರಿ ಬೆಲೆಯ ಸಮೋಸಾಗಳಂತಹ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಅವರು ಧ್ವನಿ ಎತ್ತಿದ್ದರು. 10 ನಿಮಿಷಗಳ ಡೆಲಿವರಿ ಮಾದರಿಯಿಂದ ಗಿಗ್ ಕಾರ್ಮಿಕರ ಮೇಲಾಗುವ ಶೋಷಣೆಯನ್ನು ವಿರೋಧಿಸಿದ್ದಲ್ಲದೆ, ಸ್ವತಃ ಒಂದು ದಿನ ‘ಬ್ಲಿಂಕಿಟ್’ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ ಕಾರ್ಮಿಕರ ಕಷ್ಟಗಳನ್ನು ಅರಿತಿದ್ದರು. ಅವರ ಈ ನಿರಂತರ ಹೋರಾಟದಿಂದಾಗಿ ಕೇಂದ್ರ ಸರ್ಕಾರವು 10 ನಿಮಿಷಗಳ ಕಡ್ಡಾಯ ಡೆಲಿವರಿ ನಿಯಮವನ್ನು ಹಿಂಪಡೆಯುವಂತೆ ಕಂಪನಿಗಳಿಗೆ ಸೂಚಿಸಿತ್ತು. ಇವೆಲ್ಲವೂ ಅವರನ್ನು ಜನಸಾಮಾನ್ಯರಿಗೆ ಸುಲಭವಾಗಿ ನಿಲುಕುವ ನಾಯಕನನ್ನಾಗಿ ರೂಪಿಸಿದ್ದವು.
‘ಜೆನ್-ಜಿ ಪಾರ್ಟಿ’ ಕನಸು ಭಗ್ನ, ಬೆಂಬಲಿಗರಲ್ಲಿ ನಿರಾಸೆ
ಕೆಲ ವಾರಗಳ ಹಿಂದೆ ಎಎಪಿ ಉಪನಾಯಕನ ಸ್ಥಾನದಿಂದ ಚಡ್ಡಾ ಅವರನ್ನು ತೆಗೆದುಹಾಕಿದಾಗ ಯುವಜನತೆ ಅವರಿಗೆ ಭಾರಿ ಬೆಂಬಲ ಸೂಚಿಸಿತ್ತು. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರ ಪತಿಯಾಗಿರುವ ಚಡ್ಡಾ, ಇತ್ತೀಚೆಗಷ್ಟೇ ನೆಟ್ಟಿಗನೊಬ್ಬ “ನೀವು ನಿಮ್ಮದೇ ಆದ ‘ಜೆನ್-ಜಿ ಪಾರ್ಟಿ’ ಕಟ್ಟಿ, ಬೇರೆ ಪಕ್ಷ ಸೇರಿದರೆ ದ್ವೇಷ ಎದುರಿಸಬೇಕಾಗುತ್ತದೆ” ಎಂದು ಸಲಹೆ ನೀಡಿದ್ದ ವಿಡಿಯೋವನ್ನು ಹಂಚಿಕೊಂಡು, “ಇದು ಆಸಕ್ತಿದಾಯಕ ಯೋಚನೆ” ಎಂದು ಬರೆದುಕೊಂಡಿದ್ದರು. ಅವರು ಹೊಸ ಪಕ್ಷ ಕಟ್ಟಬಹುದು ಎಂಬ ಊಹಾಪೋಹಗಳ ನಡುವೆಯೇ, ಅವರು ಬಿಜೆಪಿ ಸೇರ್ಪಡೆಯಾಗಿರುವುದು ಬೆಂಬಲಿಗರನ್ನು ಕೆರಳಿಸಿದೆ. ಆಮ್ಲಜನಕದ ಬೆಂಬಲವಿಲ್ಲದೆ ಯುರೋಪಿನ ಮೌಂಟ್ ಎಲ್ಬ್ರಸ್ ಮೇಲೆ 24 ಗಂಟೆಗಳ ಕಾಲ ತಂಗಿದ್ದ ವಿಶ್ವದ ಮೊದಲ ಪರ್ವತಾರೋಹಿ ರೋಹ್ತಾಶ್ ಖಿಲೇರಿ ಸೇರಿದಂತೆ ಹಲವು ಪ್ರಮುಖರು ಇದೀಗ ಚಡ್ಡಾ ಅವರನ್ನು ಅನ್‌ಫಾಲೋ ಮಾಡಿದ್ದಾರೆ.
ಇದನ್ನೂ ಓದಿ : ಹೊಸ ಪಕ್ಷ ಘೋಷಿಸಿದ ಕೆ.ಕವಿತಾ : ತಂದೆಗೆ ಸೆಡ್ಡು ಹೊಡೆದು ಮತ್ತೆ ‘TRS’ ಕಟ್ಟಿದ ಪುತ್ರಿ



















